ಅಡಕೆ, ಬಾಳೆ, ತೆಂಗಿನ ಗಿಡಕ್ಕೆ ಹಾನಿ

ಐಮಂಗಲ: ಹೋಬಳಿಯ ಹಲವೆಡೆ ಶುಕ್ರವಾರ ರಾತ್ರಿ ಬಿರುಗಾಳಿ ಗುಡುಗು ಸಹಿತ ಮಳೆಯಾಗಿದೆ. ಸುರಗೊಂಡನಹಳ್ಳಿ, ತವಂದಿ ಹಾಗೂ ಮೇಟಿಕುರ್ಕೆ ಗ್ರಾಮದಲ್ಲಿ ಅನೇಕ ಮರಗಳು ಧರೆಗುರುಳಿವೆ.

ತವಂದಿ ಗ್ರಾಮದ ಚಿಕ್ಕಣ್ಣ ಎಂಬುವರ 40, ಕರಿಯಣ್ಣ 10, ಸೂರಗೊಂಡನಹಳ್ಳಿಯ ಹೊಟ್ಟೆಪ್ಪ ಅವರ 20 ಅಡಕೆ ಮರ ಹಾಗೂ ಶಿವರಾಮು ಎಂಬುವವರ 10 ತೆಂಗಿನ ಮರಗಳು ನೆಲಕ್ಕುರುಳಿವೆ. ನಿಂಗಮ್ಮ ಅವರ ಮುಕ್ಕಾಲು ಎಕರೆ ಬಾಳೆ ಬೆಳೆ ನಾಶವಾಗಿದೆ.

ತವಂದಿ ಗ್ರಾಮದ ಶೇಖರಪ್ಪ, ಯಲ್ಲಪ್ಪ, ಕರಿಯಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ, ಭೀಮಾಭೋವಿ ಎಂಬುವವರ ಮನೆಯ ಶೀಟುಗಳು ಹಾರಿ ಹೋಗಿವೆ. ಗಾಳಿ ರಭಸಕ್ಕೆ ಗುಡಿಸಲು ಬಿದ್ದು ಒಂದು ಕುರಿ ಸಾವಿಗೀಡಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಾಪಂ ಇಒ ಭೇಟಿ ನೀಡಿ ಪರಿಶೀಲನೆ ನಡೆಸಿದರು.

35 ವಿದ್ಯುತ್ ಕಂಬ ನೆಲಕ್ಕೆ: ಹನುಮಂತನಹಳ್ಳಿ, ಓಬಣ್ಣನಹಳ್ಳಿ, ಮಲ್ಲಸಮುದ್ರ ಮತ್ತಿತರೆಡೆ 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸ್ಥಳಕ್ಕೆ ಭೇಟಿ ನೀಡಿದ್ದ ತಳಕು ಗ್ರಾಮದ ಬೆಸ್ಕಾಂ ಎಇಇ ಮಮತಾ, ಇನ್ನೆರಡು ದಿನದಲ್ಲಿ ವಿದ್ಯುತ್ ಪರಿವರ್ತಕ ಪೂರೈಕೆ ಮಾಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *