ಐಮಂಗಲ: ಪರಿಶಿಷ್ಟ ವರ್ಗದ ಮೀಸಲು ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಗುರುವಾರ ಸಂಜೆ ಗ್ರಾಮ ಪ್ರವೇಶಿಸಿದಾಗ ಅದ್ದೂರಿ ಸ್ವಾಗತ ದೊರೆಯಿತು.
ಶ್ರೀಗಳ ಆಗಮನಕ್ಕಾಗಿ ರಸ್ತೆ ಇಕ್ಕೆಲದಲ್ಲಿ ಬಾಳೆಕಂಬ, ತಳಿರು ತೋರಣ ಸಿಂಗರಿಸಲಾಗಿತ್ತು. ಪಾದಯಾತ್ರಿಗಳನ್ನು ಕಹಳೆ, ಡೊಳ್ಳು, ಜಯಘೋಷದಿಂದ ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಆರತಿ ಬೆಳಗಿದರು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶ್ರೀಗಳು ಮಾತನಾಡಿ, ಮೀಸಲು ಪ್ರಮಾಣವನ್ನು 7.5ಕ್ಕೆ ಹೆಚ್ಚಿಸಲು ಅನೇಕ ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಪಾದಯಾತ್ರೆ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ. ಜೂ.25ರಂದು ಬೆಂಗಳೂರಿನಲ್ಲಿ ಅಯೋಜಿಸಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಸಮುದಾಯದವರು ಒಗ್ಗಟ್ಟಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ, ಹೋರಾಟಕ್ಕೆ ಹೆಚ್ಚಿನ ಬಲ ದೊರೆತು ಬೇಡಿಕೆ ಈಡೇರಲಿದೆ ಎಂದರು.
ಪಾದಯಾತ್ರೆಗೆ ಶಾಸಕರಾದ ಟಿ.ರಘುಮೂರ್ತಿ, ರಾಜುಗೌಡ, ಸಂಸದ ಎ.ನಾರಾಯಣಸ್ವಾಮಿ, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡ, ಕೆ.ರಾಮಪ್ಪ, ಮುಖಂಡರಾದ ಹರ್ತಿಕೋಟೆ ವೀರೇಂದ್ರಸಿಂಹ, ಎ.ಓಬಳೇಶ್ ನಾಯಕ, ಟಿ.ಎಲ್.ಬಸವರಾಜಪ್ಪ, ಜಿ.ಚಂದ್ರಪ್ಪ, ಚಿಕ್ಕಸಿದ್ದವ್ವನಹಳ್ಳಿ ಬಿ.ನಾಗರಾಜಯ್ಯ ಇತರರು ಇದ್ದರು.