ಗ್ರಾಪಂ ಅಧ್ಯಕ್ಷೆ, ಪಿಡಿಒ ವಿರುದ್ಧ ಎಫ್‌ಐಆರ್

ಐಮಂಗಲ: ಅವ್ಯವಹಾರ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ, ಸದಸ್ಯರು, ಪಿಡಿಒ ಹಾಗೂ ತಾಪಂ ಇಒ ಸೇರಿ 19 ಜನರ ವಿರುದ್ಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಸರ್ಕಾರಿ ನೇಮಕಾತಿ ಆದೇಶ ಉಲ್ಲಂಘಿಸಿ, ಆಕ್ರಮ ನೇಮಕಾತಿ, ಹಣ, ಅಧಿಕಾರ ದುರುಪಯೋಗ, ನಕಲಿ ದಾಖಲೆ ಸೃಷ್ಟಿ, ಸಿಬ್ಬಂದಿ ಅಲ್ಲದವರಿಗೆ ವೇತನ ಪಾವತಿ ಆರೋಪ ಕೇಳಿಬಂದಿತ್ತು.

ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಕಂದಿಕೆರೆ ಕೆ.ಜಗದೀಶ್ ಖಾಸಗಿ ದೂರು ದಾಖಲಿಸಿದ್ದರು. ಅದನ್ನು ಪರಿಶೀಲಿಸಿದ ಹಿರಿಯೂರಿನ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿತ 19 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಅದರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರು: ಕಾನೂನು ಬಾಹಿರವಾಗಿ ಸದಸ್ಯರು ಠರಾವುಗಳನ್ನು ನಡಾವಳಿಯಲ್ಲಿ ದಾಖಲಿಸಿ, ನೀರುಗಂಟಿ ನೇಮಿಸಿಕೊಂಡಿದ್ದು, 6 ದಿನಗಳಲ್ಲಿ ಆತನಿಗೆ ವೇತನ ಪಾವತಿಸಲು ತೀರ್ಮಾನಿಸಿ, 13 ತಿಂಗಳ ವೇತನದ ರೂಪದಲ್ಲಿ 66,378 ರೂ. ಹಾಗೂ 56,166 ರೂ. ಪಾವತಿಸಿದ್ದಾರೆ.

ಕ್ಲರ್ಕ್, ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನಿಯಮಾವಳಿ ಮೀರಿ ನೇಮಕಾತಿ ಮಾಡಿದ್ದಾರೆ. ಕಾರ್ಯ ವ್ಯಾಪ್ತಿ ಮೀರಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಸರ್ಕಾರದ ಆದೇಶ, ಮಾರ್ಗಸೂಚಿ, ಉಲ್ಲಂಘಿಸಿ ಸರ್ಕಾರ ಹಣ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು ಎಂದು ಜಗದೀಶ್ ಖಾಸಗಿ ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *