ವಿಜೃಂಭಣೆಯ ಆಹೋಬಲ ನರಸಿಂಹಸ್ವಾಮಿ ಜಾತ್ರೆ

ಐಮಂಗಲ: ಚಿಕ್ಕೀರಣ್ಣನಮಾಳಿಗೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.

ಜಾತ್ರೆ ಪ್ರಯುಕ್ತ ಗ್ರಾಮಕ್ಕೆ ಆದಿರಾಳು ವೀರಾಂಜನೇಯಸ್ವಾಮಿ, ಹುಲಿತೊಟ್ಟಲಿನ ಕರಿಯಮ್ಮ, ಭೈರಪ್ಪ, ಗೊಲ್ಲರಹಟ್ಟಿ ಚಿತ್ರಲಿಂಗೇಶ್ವರಸ್ವಾಮಿ, ವೀರಗಾರಸ್ವಾಮಿ ಉತ್ಸವಮೂರ್ತಿಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ಗುರುವಾರ ಪುಣ್ಯಾಹ, ನವಗ್ರಹ ಪೂಜೆ, ಗಣಪತಿ ಹೋಮ, ವಾಸ್ತು ಹೋಮದೊಂದಿಗೆ ಜಾತ್ರೆ ಆರಂಭವಾಯಿತು. ಶುಕ್ರವಾರ ನೂತನ ದೇವಾಲಯದಲ್ಲಿ ಅಹೋಬಲ ನರಸಿಂಹಸ್ವಾಮಿ, ಈರಗಾರಸ್ವಾಮಿ, ಚಿಕ್ಕೀರ ಅಜ್ಜಯ್ಯ, ಚಿಕ್ಕೋಬಳಜ್ಜಯ್ಯ ದೇವರನ್ನು ಪ್ರತಿಷ್ಠಾಪಿಸಲಾಯಿತು.

ಗಣಪತಿ ಹೋಮ, ವಾಸ್ತು ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ-ಪ್ರಸಾಧ ವಿನಿಯೋಗ ಹಾಗೂ ಸಂಜೆ ದೇವರ ಉತ್ಸವ ನಡೆಯಿತು. ಶನಿವಾರ ಉಂಡೆಮಂಡೆ, ಬುಡಕಟ್ಟಿನ ಅಣ್ಣ ತಮ್ಮಂದಿರಿಂದ ಧಾರ್ಮಿಕ ಕಾರ್ಯಕ್ರಮ, ಅನ್ನಸಂಪರ್ತಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಾತ್ರೆ ಪ್ರಯುಕ್ತ ದೇವಾಲಯ ಆವರಣವನ್ನು ಹಸಿರು ಚಪ್ಪರ ಹಾಕಿ ಸಿಂಗರಿಸಲಾಗಿತ್ತು. ದೇವತಾ ವಿಗ್ರಹಗಳಿಗೆ ವಿಶೇಷ ಪುಷ್ಪಾಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಣೇವು: ಮೆರವಣಿಗೆಯಲ್ಲಿ ಕರೆತಂದ ದೇವತಾಮೂರ್ತಿಗಳಿಗೆ ಹೆಬ್ಬಾಗಿಲ ಬಳಿ ಚಿಕ್ಕ ಮಣೇವು, ದೇವಸ್ಥಾನದ ಆವರಣದಲ್ಲಿ ದೊಡ್ಡ ಮಣೇವು ಆಚರಣೆ ನಡೆಯಿತು. ಸಕ್ಕರೆ, ಬಾಳೆಹಣ್ಣು ಸಮರ್ಪಿಸಲಾಯಿತು. ಮಡಿಯುಟ್ಟ ಭಕ್ತರು ವ್ಯಾದ್ಯಗಳ ತಾಳಕ್ಕೆ ಭಕ್ತಿಯಿಂದ ಹೆಜ್ಜೆ ಹಾಕಿದರು.

ಡಿಕ್ಕಿ ಹಬ್ಬ: ಈ ಜಾತ್ರೆಯಲ್ಲಿ ಅತ್ತೆ-ಸೊಸೆಯರು, ಅತ್ತಿಗೆ-ನಾದಿನಿಯರು ಮುಂದೆಲೆಯಿಂದ ಪರಸ್ಪರ ಡಿಕ್ಕಿ ಹೊಡೆವ ಕಾರ್ಯಕ್ರಮ ಹಾಗೂ ಟಗರಿನ ಕಾಳಗ ನಡೆಯಿತು. ಅತ್ತಿಗೆ, ನಾದಿನಿಯರಲ್ಲಿ ಪರಸ್ಪರ ಮನಸ್ಥಾಪ ಉಂಟಾಗುವುದು ಸಹಜ. ಪೂರ್ವಿಕರು ಅತ್ತಿಗೆ, ನಾದಿನಿಯನ್ನು ದೇವಸ್ಥಾನದಲ್ಲಿ ರಾಜಿ ಮಾಡಿಸಿ, ಮುಂದೆಲೆಯಲ್ಲಿ ಡಿಕ್ಕಿ ಹೊಡೆಸುತ್ತಿದ್ದರು. ಇದು ಅನಾದಿಕಾಲದಿಂದಲೂ ಆಚರಣೆಯಲ್ಲಿದೆ.