ಶಿಕ್ಷಣ ಪ್ರತಿ ಮಗುವಿನ ಹಕ್ಕು

ಐಮಂಗಲ: ಮಕ್ಕಳನ್ನು ಬಾಲ್ಯದಲ್ಲಿ ದುಡಿಮೆ ಹಚ್ಚದೇ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿ ಪಾಲಕರ ಕರ್ತವ್ಯ ಎಂದು ಚಿತ್ರ ಡಾನ್‌ಬಾಸ್ಕೋ ಸಂಸ್ಥೆ ನಿರ್ದೇಶಕ, ಫಾದರ್ ಸೋನಿಚಂದ್ ಹೇಳಿದರು.

ಪಾಲವ್ವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಚಿತ್ರ ಡಾನ್‌ಬಾಸ್ಕೋ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ಶಿಕ್ಷಣ ಪ್ರತಿ ಮಗುವಿನ ಹಕ್ಕು. ಮಕ್ಕಳನ್ನು ಈ ಹಕ್ಕಿನಿಂದ ವಂಚಿಸುವುದು ಅಮಾನವೀಯ. ಅವರ ಕನಸುಗಳಿಗೆ ನೀರೆರೆದು ಉತ್ತಮ ಶಿಕ್ಷಣ ನೀಡಿದರೆ, ಭವಿಷ್ಯ ಉತ್ತಮವಾಗುತ್ತದೆ ಎಂದು ತಿಳಿಸಿದರು.

ಕ್ರೀಮ್ ಜಿಲ್ಲಾ ಸಂಯೋಜಕ ಟಿ.ಎಚ್.ಮಹಾಂತೇಶ್ ಮಾತನಾಡಿ, ಹೋಟೆಲ್, ಗ್ಯಾರೇಜು, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ತಪ್ಪು ಎಂದರು.

18 ವರ್ಷ ಪೂರ್ಣಗೊಳ್ಳದ ಯುವತಿಯರಿಗೆ ಮದುವೆ ಮಾಡುವುದು ಅನಿಷ್ಟ ಪದ್ಧತಿ. ಜತೆಗೆ ಅಪರಾಧ ಎಂದು ಎಚ್ಚರಿಸಿದ ಅವರು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.

ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಗ್ರಾಮಸ್ಥ ವೇದಮೂರ್ತಿ, ಮುಖ್ಯಶಿಕ್ಷಕಿ ಪಿ.ಎನ್.ಮಂಜುಳಾ, ಪರಮೇಶ್ವರಪ್ಪ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *