ಶುಚಿತ್ವದಿಂದ ಮಲೇರಿಯಾ ದೂರ


ಐಮಂಗಲ: ಮನೆ ಮತ್ತು ಸುತ್ತ ಮುತ್ತಲ ಪರಿಸರ ಶುಚಿಯಾಗಿಟ್ಟುಕೊಂಡರೆ ಮಲೇರಿಯಾದಂತ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ಐಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಂದ್ರಕಾಂತ್ ಗೌಡರ್ ತಿಳಿಸಿದರು.

ಐಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ನೀರು ಸಂಗ್ರಹ ತೊಟ್ಟಿಗಳನ್ನು ಖಾಲಿ ಮಾಡಿ ಒಣಗಿಸುವುದು, ತೊಟ್ಟಿಯ ಒಳಗೆ ಸುಣ್ಣ ಹಚ್ಚುವುದು, ಡ್ರಂಗಳನ್ನು ವಾರಕ್ಕೊಮ್ಮೆ ನೀರು ಖಾಲಿ ಮಾಡಿ ಒಣಗಿಸುವುದು, ಸೊಳ್ಳೆಗಳು ನೀರಲ್ಲಿ ಸೇರದಂತೆ ಮುಚ್ಚಳ ಮುಚ್ಚುವುದು, ಟಯರ್, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿದರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದರು.

ತಲೆ ನೋವು, ವಾಂತಿ, ಜ್ವರದ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಮನೆಗಳ ಸುತ್ತಮುತ್ತ ಚೆಂಡು ಹೂವು, ತುಳಸಿ ಗಿಡ ಬೆಳೆಸುವುದರಿಂದ ಸೊಳ್ಳೆ ನಿಯಂತ್ರಿಸಬಹುದು ಎಂದು ತಿಳಿಸಿದರು. ಆರೋಗ್ಯ ಇಲಾಖೆ ಮೇಲ್ವಿಚಾರಕ ನಾಗರಾಜು, ಶ್ರೀನಿವಾಸ, ಸೋಮ್ಲಾಪುರ, ಮಂಜುಳಾ, ರಮೇಶ್, ಅಂಜಿನಮ್ಮ, ಅಮಿತ್, ರಾಜೇಶ್ವರಿ ಇದ್ದರು.

Leave a Reply

Your email address will not be published. Required fields are marked *