ಚುರುಕುಗೊಂಡ ಕೃಷಿ ಚಟುವಟಿಕೆ

ಐಮಂಗಲ: ಹೋಬಳಿಯಾದ್ಯಂತ ಭಾನುವಾರ, ಗುಡುಗು, ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ರೋಹಿಣಿ ಮಳೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು, ರೈತರಿಗೆ ಸಂತಸದ ಜತೆ ಹಾನಿ ತಂದೊಡ್ಡಿದೆ.

ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ ಜನ-ಜಾನುವಾರುಗಳಿಗೆ ನೀರು ದೊರೆತು, ಇಳೆ ತಂಪಾಯಿತು. ಭೂಮಿ ಹದ ಮಾಡಿಕೊಂಡು ಈರುಳ್ಳಿ, ಶೇಂಗಾ ಸೇರಿ ಹಲವು ಬೆಳೆ ಬಿತ್ತನೆಗೆ ನೀರಿಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬಿತ್ತನೆ ಚಟುವಟಿಕೆಗಳು ಗರಿಗೆದರಿವೆ. ಕೃಷಿಕರು, ರೈತ ಸಂಪರ್ಕ ಕೇಂದ್ರದಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಣಿಗೆ ಧಾವಿಸುತ್ತಿದ್ದಾರೆ.

ಸಿಡಿಲಿನ ಆಘಾತಕ್ಕೆ ಹಲವು ವಿದ್ಯುತ್ ದೀಪ, ಬೀದಿ ದೀಪ, ಟಿವಿಗಳಿಗೆ ಹಾನಿಯಾಗಿದೆ. ಗಾಳಿಯ ಆರ್ಭಟಕ್ಕೆ ವದ್ಧಿಕೆರೆ ಗ್ರಾಮದ ಬೋರಣ್ಣ, ಸಿದ್ಧವೀರಮ್ಮ ಅವರ ಮನೆ ಮೇಲೆ ಮರ ಬಿದ್ದಿದೆ. ಓಬಣ್ಣ ಅವರ ಮನೆ ಚಾವಣಿ ಶೀಟ್‌ಗಳು ಹಾರಿ ಹೋಗಿವೆ. ಕಲ್ಲಹಟ್ಟಿ ಗ್ರಾಮದ ಜಯಣ್ಣನವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಹೆಂಚುಗಳಿಗೆ ಹಾನಿಯಾಗಿದೆ.

ಮೇಟಿಕುರ್ಕೆ ಗ್ರಾಮದ ಸೋಮಶೇಖರಪ್ಪನವರ ಜಮೀನಿನಲ್ಲಿ ಫಸಲಿಗೆ ಬಂದಿದ್ದ ಬಾಳೆಗಿಡ ನೆಲಕಚ್ಚಿವೆ. ಇದೇ ಗ್ರಾಮದಲ್ಲಿ ಎರಡು ಗುಡಿಸಲು, ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಐಮಂಗಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದ ಮರಗಳು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದು, ತಂತಿಗಳು ತುಂಡಾಗಿವೆ.

ತಾಳವಟ್ಟಿ ಗ್ರಾಮದ ಭೋವಿ ಕಾಲನಿಯಲ್ಲಿ ಕುಡಿವ ನೀರಿಗೆ ಅಳವಡಿಸಲಾಗಿದ್ದ ವಿದ್ಯುತ್ ಪರಿವರ್ತಕ ನೆಲಕ್ಕುರುಳಿದೆ. ಜಮೀನಿನಲ್ಲಿದ್ದ ವಿದ್ಯುತ್ ಕಂಬಗಳು, ಮರಗಳು ಉರುಳಿವೆ. ಮಲ್ಲಪ್ಪನಹಳ್ಳಿ, ಸಲಬೊಮ್ಮನಹಳ್ಳಿಯಲ್ಲಿ ಯರಬಳ್ಳಿಯ ದೊಡ್ಡ ಸೇತುವೆ ಹಳ್ಳ ತುಂಬಿ ಗುಡನೂರ ಕೆರೆಗೆ ನೀರು ಹರಿಯುತ್ತಿದೆ.

ಕೈಕೊಟ್ಟ ವಿದ್ಯುತ್: ಮಳೆ ಗಾಳಿ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ವಿದ್ಯುತ್ ಇಲ್ಲದೇ ಕುಡಿವ ನೀರಿಗೂ ಜನರು ಪರದಾಡಿದರು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳಲ್ಲಿ ವಿದ್ಯುತ್ ಇಲ್ಲದೇ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು.