ವಿಶ್ವಾದ್ಯಂತ 108 ಶಾಖಾ ಮಠ ವಿಸ್ತರಣೆ ಗುರಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

>>

ವಿಜಯವಾಣಿ ಸುದ್ದಿಜಾಲ ಉಡುಪಿ
ಪುತ್ತಿಗೆ ಮಠ ವಿಶ್ವಮಟ್ಟದಲ್ಲಿ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದು, 11 ದೇಶಗಳಲ್ಲಿ ಶಾಖಾ ಮಠಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 108 ದೇಶಗಳಲ್ಲಿ ಕೃಷ್ಣ ಮಂದಿರ ನಿರ್ಮಾಣ ಸಂಕಲ್ಪ ಕೈಗೊಳ್ಳಲಾಗಿದೆ. ಹೀಗಾಗಿ ಕಾರ್ಯ ಬಾಹುಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಲಾಯಿತು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಹಿರಿಯಡ್ಕ ಸಮೀಪ ಪುತ್ತಿಗೆ ಮಠದಲ್ಲಿ ಸೋಮವಾರ ನಡೆದ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮೊದಲ ಯತಿ ಉಪೇಂದ್ರ ತೀರ್ಥರ ಪರಂಪರೆಯಿಂದಲೂ ಪುತ್ತಿಗೆ ಮಠ ಸಾಹಸಿಗಳ ಮಠವಾಗಿದೆ. ಪ್ರಸಕ್ತ 5 ಮಂದಿ ಮಠಾಧಿಪತಿಗಳು ಪುತ್ತಿಗೆ ಮಠದ ಶಿಷ್ಯರು ಎಂಬುದು ಹೆಮ್ಮೆಯ ವಿಚಾರ. ಕೃಷ್ಣನ ಸಂಕಲ್ಪದಂತೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿದೆ. ಶುಭ ಮುಹೂರ್ತಕ್ಕೆ ಈ ದಿನ ಹೊರತುಪಡಿಸಿದರೆ ಬೇರೆ ದಿನಕ್ಕೆ ಒಂದೂವರೆ ವರ್ಷ ಕಾಯಬೇಕಾಗಿದ್ದರಿಂದ ಸರಳ ಸಮಾರಂಭದಲ್ಲಿ ಸನ್ಯಾಸ ದೀಕ್ಷೆ ಕಾರ್ಯಕ್ರಮ ನಿಗದಿಪಡಿಸಲಾಯಿತು ಎಂದರು.

 ಪುತ್ತಿಗೆ ಆಧ್ಯಾತ್ಮಿಕ ಕೇಂದ್ರ: ಪುತ್ತಿಗೆ ಮೂಲ ಮಠವನ್ನು ಅಂತಾರಾಷ್ಟ್ರೀಯ ಮಟ್ಟದ ಆದರ್ಶ ಅಧ್ಯಾತ್ಮಿಕ ಕೇಂದ್ರವಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ. ನೂತನ ಯತಿಗಳು ಇದೇ ಗುರುಕುಲದಲ್ಲಿ ಶಾಸ್ತ್ರಾಧ್ಯಯನ ನಡೆಸಲಿದ್ದಾರೆ. ಚಿತ್ರಾಪುರ ಮಠ ಬಾಲ ಸಂನ್ಯಾಸಿ ಹಾಗೂ ಪುತ್ತಿಗೆ ಮಠದ ಪ್ರೌಢಸನ್ಯಾಸಿ ಜತೆಯಲ್ಲೇ ವೇದಾಭ್ಯಾಸ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಗೃಹಸ್ಥರು, ವಿದ್ಯಾರ್ಥಿಗಳಿಗೂ ಮಠದಲ್ಲಿ ಪಾಠಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಉಡುಪಿಯಲ್ಲಿ ವಸತಿ ಸೌಕರ್ಯ ನೀಡಲಾಗುವುದು. ಮಠಕ್ಕೆ ಬರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗುವುದು. ಸ್ವಾಮೀಜಿಗಳ ಜತೆಯಲ್ಲಿ ಪಾಠ ಕೇಳುವ ಅವಕಾಶ ಲಭಿಸಲಿದೆ ಎಂದರು.

8 ತಿಂಗಳ ಪ್ರಕ್ರಿಯೆ: ಮಠದ ಉತ್ತರಾಧಿಕಾರಿ 29 ವರ್ಷದ ಸುಶ್ರೀಂದ್ರ ತೀರ್ಥ ಶ್ರೀಗಳು ಪೂರ್ವಾಶ್ರಮದಲ್ಲಿ ಬೆಂಗಳೂರಿನಲ್ಲಿ ಆರ್ಸನ್ ಸಾಫ್ಟ್‌ವೇರ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದು, 8 ತಿಂಗಳ ಹಿಂದೆ ಬೆಂಗಳೂರಿನ ಮಠದಲ್ಲಿ ನಮ್ಮನ್ನು ಭೇಟಿ ಮಾಡಿ ಸನ್ಯಾಸಾಶ್ರಮ ಸ್ವೀಕರಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಸನ್ಯಾಸದ ಬಗ್ಗೆ ಅವರ ಒಲವು ನೋಡಿ ಎಲ್ಲ ಕಡೆಗಳಿಂದಲೂ ಮಾಹಿತಿ ಸಂಗ್ರಹಿಸಿ, ಜಾತಕ ವಿಮರ್ಶೆ ಮಾಡಿ ದೀಕ್ಷೆ ನೀಡಲು ನಿರ್ಧರಿಸಲಾಯಿತು ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು.

ಮೇ 16ರಂದು ಸಾರ್ವಜನಿಕ ಅಭಿನಂದನೆ: ತುರ್ತಾಗಿ ಸನ್ಯಾಸ ದೀಕ್ಷೆ ಕಾರ್ಯಕ್ರಮ ಆಯೋಜಿಸಿದ ಕಾರಣ ಅನೇಕ ಮಠದ ಅಭಿಮಾನಿಗಳು, ಶಿಷ್ಯರಿಗೆ ಆಮಂತ್ರಣ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮೇ 16ರಂದು ನರಸಿಂಹ ಜಯಂತಿಯಂದು ಪುತ್ತಿಗೆ ಮೂಲ ಮಠದಲ್ಲಿ ಸಾರ್ವಜನಿಕ ಅಭಿನಂದನಾ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.

ಹುಡುಗಿ ಮೇಲೆ ಆಸಕ್ತಿ ಇಲ್ಲ!: ಸನ್ಯಾಸ ದೀಕ್ಷೆ ನೀಡುವ ಮುನ್ನ ಪ್ರಶಾಂತ್ ಆಚಾರ್ಯ ಅವರಿಗೆ ತಿಳಿಯದಂತೆ ಅವರು ಕೆಲಸ ನಿರ್ವಹಿಸುತ್ತಿದ್ದ ಕಂಪನಿಯ ಅಧಿಕಾರಿಗಳನ್ನು, ಸಹೋದ್ಯೋಗಿಗಳನ್ನು ಮಠಕ್ಕೆ ಕರೆಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಬಾಡಿಗೆ ಮನೆ ಮಾಲೀಕರ ಬಳಿಯೂ ವಿಚಾರಣೆ ಮಾಡಿದ್ದೇವೆ. ಎಲ್ಲರ ಬಳಿ ಮಾತನಾಡಿದ ಮೇಲೆ ಅವರಿಗೆ ಹುಡುಗಿಯರ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿದು ಸನ್ಯಾಸಾಶ್ರಮ ನೀಡಿದ್ದೇವೆ ಎಂದು ಪುತ್ತಿಗೆ ಶ್ರೀಗಳು ಹಾಸ್ಯ ಚಟಾಕಿ ಹಾರಿಸಿದರು.

15 ವರ್ಷದಿಂದ ಸನ್ಯಾಸದ ಆಸಕ್ತಿ: ಕಳೆದ 15 ವರ್ಷದಿಂದ ಸನ್ಯಾಸದ ಆಸಕ್ತಿ ಇತ್ತು. ಐದು ವರ್ಷದಿಂದ ಕೃಷ್ಣಪೂಜೆ ಹಂಬಲ ತೀವ್ರವಾಗಿತ್ತು. ಆದರೆ ಸನ್ಯಾಸ ದೀಕ್ಷೆ ಯಾರಲ್ಲಿ ಕೇಳುವುದು ಎಂಬುದು ತಿಳಿಯುತ್ತಿರಲಿಲ್ಲ. ಕೃಷ್ಣ-ಮುಖ್ಯಪ್ರಾಣ ದೇವರ ಅನುಗ್ರಹದಿಂದ ಪುತ್ತಿಗೆ ಶ್ರೀಗಳು ಶಿಷ್ಯನನ್ನಾಗಿ ಸ್ವೀಕರಿಸಿ ಅನುಗ್ರಹಿಸಿದ್ದಾರೆ. ಮಠದ ಜ್ಞಾನ ಪರಂಪರೆ ವಿಶಿಷ್ಟವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ತಾಯಿ ಕೃಷ್ಣನ ಭಕ್ತೆಯಾಗಿದ್ದು, ಕೃಷ್ಣನ ಸೇವೆಗೆ ಸನ್ಯಾಸ ಸ್ವೀಕರಿಸುವುದರಿಂದ ಒಪ್ಪಿಕೊಂಡಿದ್ದಾರೆ ಎಂದು ನೂತನ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *