PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.
ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಿಕೊಂಡೇ ಕಚೇರಿಗೆ ಆಗಮಿಸಿದ ಅವರನ್ನು ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಮಂಗಳವಾರ ಬೆಳಗ್ಗೆ 10.45ರಲ್ಲಿ ಅವರು ಕಚೇರಿಗೆ ಆಗಮಿಸಿದರು. ಸುತ್ತಲೂ ನೆರೆದಿದ್ದ ಜನರ ಕಡೆಗೆ ಮಂದಹಾಸವೊಂದನ್ನು ಬೀರಿದ ಅವರು ಕಚೇರಿಯ ಒಳಗೆ ನಡೆದು ಸಾಗಿದರು. ಸಿಎಂ ಪರಿಕ್ಕರ್​ ಇಂದು ಕಚೇರಿಗೆ ಆಗಮಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದ ಬಿಜೆಪಿ ಕಾರ್ಯಕರ್ತರು ಅದಾಗಲೇ ಸಚಿವಾಲಯದ ಬಳಿ ನೆರೆದಿದ್ದರು.

ಮಂತ್ರಿಗಳು, ಶಾಸಕರು, ಸ್ಪೀಕರ್​ ಪ್ರಮೋದ್​ ಸಾವಂತ್​ ಮತ್ತಿತರರು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಇದಾದ ನಂತರ ಅವರು, ರಾಜ್ಯದಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಮತ್ತು ಬಡ್ತಿ ವಿಚಾರವಾಗಿ ಸಿಬ್ಬಂದಿ ಮತ್ತು ಒಳಾಡಳಿತ ಇಲಾಖೆಯೊಂದಿಗೆ ಚರ್ಚೆ ನಡೆಸಿದರು.

ಪ್ಯಾಂಕ್ರಿಯಾಟಿಕ್​ (ಮೇದೋಜೀರಕಾಂಗ ಗ್ರಂಥಿಯ) ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಮೊದಲಿಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ದೆಹಲಿಯ ಏಮ್ಸ್ ​ಗೆ ದಾಖಲಾಗಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಗೋವೆಗೆ ಬಂದಿದ್ದರು.

ಕಳೆದ ತಿಂಗಳ 16ರಂದು ಪರಿಕ್ಕರ್​ ಅವರು ತಮಗೆ ಅಳವಡಿಸಿದ್ದ ಜೀವರಕ್ಷಕ ಸಲಕರಣೆಗಳೊಂದಿಗೇ ಪಣಜಿಯ ಸೇತುವೆ ನಿರ್ಮಾಣ ಸ್ಥಳಕ್ಕೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿ ದೇಶಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರತಿಪಕ್ಷಗಳ ಟೀಕೆಗೂ ಗುರಿಯಾಗಿದ್ದರು.

Leave a Reply

Your email address will not be published. Required fields are marked *