ರಾಯಚೂರು: ಏಮ್ಸ್ ಮಂಜೂರು ಮಾಡಬೇಕೆಂದು ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದ್ದು, ಮಂಗಳವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ:ಏಮ್ಸ್ ಮಂಜೂರು ಮಾಡಲು ಒತ್ತಾಯ
ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸಮಿತಿಯಿಂದ ರಾಯಚೂರಿನಲ್ಲೇ ಏಮ್ಸ್ ಸ್ಥಾಪಿಸಬೇಕೆಂಬ ಒತ್ತಾಯದೊಂದಿಗೆ ಶಿಸ್ತುಬದ್ಧ ಹಾಗೂ ಕಾನೂನು ನಿಯಮಗಳ ಪಾಲನೆಯೊಂದಿಗೆ ಸಾಕಷ್ಟು ಪ್ರತಿಭಟನೆಗಳನ್ನು ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಏಮ್ಸ್‌ಗಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು ಬಿಟ್ಟರೆ ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು. ಅಲ್ಲದೆ ರಾಜ್ಯ ಸರ್ಕಾರ ಕೂಡಲೇ ಸರ್ವ ಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ ಏಮ್ಸ್ ಮಂಜೂರು ಮಾಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಿತಿ ಸಂಚಾಲಕ ಅಶೋಕ ಜೈನ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ, ಪ್ರಮುಖರಾದ ಜಾನ್ ವೆಸ್ಲಿ, ವೀರಭದ್ರಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ, ಬಸವರಾಜ ಮಿಮಿಕ್ರಿ, ಶಾರದಾ ಹುಲಿ ನಾಯಕ, ಮಹಾವೀರ, ರೂಪಾ ಶ್ರೀನಿವಾಸ ನಾಯಕ ಇತರರಿದ್ದರು.