ನಿಡಗುಂದಿ: ಏಡ್ಸ್ ಸೋಂಕು ತಡೆಗಟ್ಟಲು, ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ ಗೋಟಖಂಡ್ಕಿ ಹೇಳಿದರು.
ಪಟ್ಟಣದ ಎಂ.ವಿ.ನಾಗಠಾಣ ಕಾಲೇಜು ಸಭಾ ಭವನದಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್‌ಐವಿ ಸೋಂಕು ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯತೆ ಇದೆ. ಎಚ್‌ಐವಿ ಬಾಧಿತರ ಬಗ್ಗೆ ಯಾವುದೇ ತಾರತಮ್ಯ ಮಾಡದೆ ಗೌರವದಿಂದ ಕಾಣಬೇಕು. ಬಾಧಿತರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಳ್ಳಬೇಕು ಎಂದರು.
ಜಿವಿವಿಎಸ್ ಸಮೂಹ ಶಿಕ್ಷಣ ಸಂಸ್ಥೆ ಚೇರ್ಮನ್ ಸಿದ್ಧಣ್ಣ ನಾಗಠಾಣ ಮಾತನಾಡಿ, ಏಡ್ಸ್ ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ ಅದು ಬಾರದಂತೆ ಜಾಗೃತಿ ವಹಿಸುವುದು ಸೂಕ್ತ. ಈ ರೋಗ ತಡೆಗಟ್ಟಲು ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದು, ಸರ್ಕಾರದ ಜತೆ ಸಾರ್ವಜನಿಕರು ಸಹಕರಿಸಿ ರೋಗಮುಕ್ತ ಜೀವನ ನಡೆಸುವಂತಾಗಬೇಕು ಎಂದರು.
ಜಿಲ್ಲಾ ಏಡ್ಸ್ ಹಾಗೂ ಕ್ಷಯ ರೋಗ ನಿಯಂತ್ರಣಾಧಿಕಾರಿ ಎಂ.ಬಿ ಬಿರಾದಾರ, ಬಾಬುರಾವ್ ತಳವಾರ, ಗಿರೀಶ ಹೂಗಾರ, ಡಾ.ಅನುಪ್ ನಾಗಠಾಣ, ಎನ್.ಎಸ್ ಕೂಚಬಾಳ ಇತರರು ಮಾತನಾಡಿದರು.
ಎಂ.ವಿ.ನಾಗಠಾಣ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಚಾರ್ಯ ಎಸ್.ಆರ್.ಬಿರಾದಾರ ಪ್ರಸ್ತಾವಿಕ ಮಾತನಾಡಿದರು. ಎನ್.ಸಿ ಬಿಳಗಿ, ಎ.ಆರ್ ಇಟಗಿ, ಬಿ.ಎಸ್ ಸರಗಣಾಚಾರಿ, ಎಸ್.ಎಸ್ ನರಸಗೌಡರ, ಎ.ಎಸ್ ಚನ್ನಿಗಾವಿ ಸೇರಿದಂತೆ ಕಾಲೇಜು ಬೋದಕ ಸಿಬ್ಬಂದಿ ಇದ್ದರು.