More

  ಅನುದಾನಿತ ಕನ್ನಡ ಶಾಲೆ ಏಕಾಏಕಿ ಬಂದ್

  ಅಳ್ನಾವರ: ತಾಲೂಕು ಕೇಂದ್ರ ಅಳ್ನಾವರ ಪಟ್ಟಣದ ವಿದ್ಯಾನಗರದಲ್ಲಿರುವ ಅನುದಾನಿತ ನಂದೀಶ್ವರ ಕನ್ನಡ ಪ್ರಾಥಮಿಕ ಶಾಲೆಯನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಅನನುಕೂಲವಾಗಿದೆ.

  ಪಟ್ಟಣದಿಂದ 2 ಕಿಮೀ ಅಂತರದಲ್ಲಿ ಹಳಿಯಾಳ ರಸ್ತೆ ಅಕ್ಕಪಕ್ಕದಲ್ಲಿ ವಿದ್ಯಾನಗರ ಹಾಗೂ ಮಾನಖಾಪುರ ಸ್ಲಂ ಪ್ರದೇಶಗಳಿವೆ. ಇಲ್ಲಿನ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ 5 ದಶಕಗಳಿಂದ 1ರಿಂದ 5ನೇ ತರಗತಿವರೆಗೆ ಈ ಎರಡು ಸ್ಥಳಗಳಲ್ಲಿ ಅನುದಾನಿತ ಶಾಲೆಗಳು ನಡೆಯುತ್ತಿದ್ದವು. ನಂದೀಶ್ವರ ಶಾಲೆ ನಂದಿ ಹರಿಜನ ಗಿರಿಜನ ಹಾಗೂ ಹಿಂದುಳಿದ ಸಮಾಜ ಕಲ್ಯಾಣ ಸೇವಾ ಸಂಘಕ್ಕೆ ಸೇರಿದ್ದಾಗಿದೆ.

  ಮೂರು ವರ್ಷಗಳ ಹಿಂದೆ ಮಕ್ಕಳ ದಾಖಲಾತಿ ಕೊರತೆಯಿಂದ ಮಾನಖಾಪುರದಲ್ಲಿದ್ದ ಶಾಲೆಯನ್ನು ಮುಚ್ಚಲಾಗಿದೆ. ಈ ಎರಡು ಪ್ರದೇಶಗಳ ನಿವಾಸಿಗಳ ಮಕ್ಕಳು ವಿದ್ಯಾನಗರದಲ್ಲಿ ಇದ್ದ ನಂದೀಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಇದೀಗ ಇದ್ದ ಏಕೈಕ ಕನ್ನಡ ಪ್ರಾಥಮಿಕ ಶಾಲೆಯೂ ಏಕಾಏಕಿ ಮುಚ್ಚಿರುವುದರಿಂದ ಈ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

  ಮೇ 29ರಂದು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಶಾಲೆ ಆರಂಭವಾಗಿ 15 ದಿನ ಕಳೆದರೂ ಶಾಲೆಯ ಬಾಗಿಲು ತೆರೆದಿಲ್ಲ, ಶಿಕ್ಷಕರು ಇತ್ತ ಸುಳಿದಿಲ್ಲ. ಹೀಗಾಗಿ, ಆ ಭಾಗದ ಪಾಲಕರಿಗೆ ತಮ್ಮ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಲು ಅಡಚಣೆಯಾಗಿದೆ. ಇನ್ನೊಂದೆಡೆ 2ರಿಂದ 5 ನೇ ತರಗತಿಯಲ್ಲಿ ಓದುತ್ತಿದ್ದ 30ಕ್ಕೂ ಅಧಿಕ ಮಕ್ಕಳ ಭವಿಷ್ಯವು ಅತಂತ್ರವಾಗಿದೆ. ಇದ್ದ ಇಬ್ಬರು ಶಿಕ್ಷಕರು ನಿವೃತ್ತಿಯಾಗಿದ್ದಾರೆ ಎನ್ನಲಾಗುತ್ತಿದೆ. ಬೇರೆ ಶಾಲೆಗೆ ದಾಖಲಿಸಲು ವರ್ಗಾವಣೆ ಪತ್ರ ಕೊಡುವವರೇ ಇಲ್ಲದಾಗಿದೆ. ಹೀಗಾಗಿ, ಮಕ್ಕಳ ಪಾಲಕರು ದಿಕ್ಕು ತೋಚದಂತಾಗಿದ್ದಾರೆ.

  ಶಾಲೆ ಬಂದ್ ಆಗಿರುವ ಕುರಿತು ಕೇಳಿದರೆ ಆಡಳಿತ ಮಂಡಳಿಯವರು, ಇದು ಶಿಕ್ಷಣ ಇಲಾಖೆ ಹಾಗೂ ಪಾಲಕರಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಅಸಡ್ಡೆಯ ಉತ್ತರ ನೀಡುತ್ತಾರೆ. ಈ ಶಾಲೆಯಿಂದ ಬೇರೆ ಶಾಲೆಗೆ ದಾಖಲಿಸಲು ಇಚ್ಛಿಸಿದರೂ ಪಟ್ಟಣಕ್ಕೆ ಬರಬೇಕು. ಇಲ್ಲಿನ ಮಕ್ಕಳು ಶಾಲೆಗಳಿಗೆ ಹೋಗಲು ರಾಜ್ಯ ಹೆದ್ದಾರಿ ಬಳಸಬೇಕಾಗುತ್ತದೆ. ಆದರೆ, ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯಿಂದ ಮಕ್ಕಳು ಶಾಲೆಗೆ ತೆರಳಲು ಭಯಪಡುತ್ತಾರೆ ಎಂದು ಇಲ್ಲಿಯ ನಿವಾಸಿ ಯಲ್ಲಪ್ಪ ಕಲಾಲ ಹೇಳುತ್ತಾರೆ.

  See also  ಗೋಡೆ ಮೇಲೆ ರಾಜಕೀಯ ಪ್ರೇರಿತ ಕರಪತ್ರ ಅಂಟಿಸುವಂತಿಲ್ಲ

  ರಾಜ್ಯದ ಗಡಿ ಭಾಗದಲ್ಲಿ ಬಂದ ಆಗುತ್ತಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  ನೋಡಲ್ ಅಧಿಕಾರಿ, ಸಿಆರ್​ಪಿ-ಬಿಆರ್​ಪಿ ಅವರನ್ನು ಒಳಗೊಂಡ ಸಮಿತಿ ಈಗಾಗಲೇ ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸಿದೆ. ಈ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ, ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಂಡು ಶಾಲೆ ಆರಂಭಿಸಲಾಗುವುದು.

  | ಎಸ್.ಎಸ್. ಸದಲಗಿ ಬಿಇಒ ಧಾರವಾಡ ಹಾಗೂ ಅಳ್ನಾವರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts