7 ವಾರಗಳೇ ಕಳೆದಿವೆ… ಪಕ್ಷವನ್ನು ಬುಡಮಟ್ಟದಿಂದ ಪುನಶ್ಚೇತನಗೊಳಿಸಬಲ್ಲ ಪ್ರಭಾವಿ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಿ…

ಭೋಪಾಲ್​: ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ ನೀಡಿ 7 ವಾರಗಳೇ ಕಳೆದಿವೆ. ಆದರೆ, ಇದುವರೆಗೂ ಅವರ ರಾಜೀನಾಮೆಯನ್ನು ಅಂಗೀಕರಿಸಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಷಯವಾಗಿ ಎಐಸಿಸಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರ ಪರಿಣಾಮ ರಾಷ್ಟ್ರಾದ್ಯಂತ ಕಾಂಗ್ರೆಸ್​ ಪಕ್ಷ ಸಂಘಟನಾತ್ಮಕವಾಗಿ ದುರ್ಬಲಗೊಳ್ಳುತ್ತಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್​ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಸಲಹೆ ನೀಡಿದ್ದಾರೆ.

ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್​ ಚಿಹ್ನೆ ಮೇಲೆ ಗೆದ್ದು ಶಾಸಕರಾಗಿದ್ದವರು ಅನ್ಯ ಪಕ್ಷಗಳಿಗೆ ಸಾಮೂಹಿಕವಾಗಿ ಪಕ್ಷಾಂತರಗೊಳ್ಳುತ್ತಿದ್ದಾರೆ. ಇದಕ್ಕೆ ತೆಲಂಗಾಣದಲ್ಲಿ 12 ಶಾಸಕರು ಆಡಳಿತಾರೂಢ ಟಿಆರ್​ಎಸ್​ಗೆ ಪಕ್ಷಾಂತರಗೊಂಡಿದ್ದು, ಗೋವಾದಲ್ಲಿ ಕೂಡ ಇಂಥದ್ದೇ ಬೆಳವಣಿಗೆಯಲ್ಲಿ 10 ಕಾಂಗ್ರೆಸ್​ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು ತಾಜಾ ಉದಾಹರಣೆಗಳಾಗಿವೆ ಎಂದು ತಿಳಿಸಿದರು.

ಈ ಎಲ್ಲ ಹಿನ್ನೆಲೆಯಲ್ಲಿ ಪಕ್ಷವನ್ನು ಬುಡಮಟ್ಟದಿಂದ ಬಲಪಡಿಸಿಕೊಂಡು, ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಭಾವಿ ನಾಯಕರೊಬ್ಬರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ, ಪಕ್ಷವನ್ನು ಉಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

2017ರಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಂದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ರಾಹುಲ್​ ಗಾಂಧಿ, ಇತ್ತೀಚಿಗಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ತಂದುಕೊಡಲು ವಿಫಲರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ 2019ರ ಮೇ 25ರಂದು ರಾಜೀನಾಮೆ ಕೊಟ್ಟಿದ್ದಾರೆ. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಾಕಷ್ಟು ಒತ್ತಡಗಳು ಬಂದರೂ ತಮ್ಮ ನಿರ್ಧಾರ ಅಚಲ ಎಂದು ರಾಹುಲ್​ ಗಾಂಧಿ ಹೇಳುತ್ತಲೇ ಇದ್ದಾರೆ.

ಇದೇ ವೇಳೆ ಎಐಸಿಸಿ ಅಧ್ಯಕ್ಷರನ್ನಾಗಿ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ನೇಮಿಸಬೇಕು ಎಂದು ಹೇಳಿ ಮಧ್ಯಪ್ರದೇಶದಾದ್ಯಂತ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಗ್ರಹಿಸಲಾಗುತ್ತಿದೆ. ಆದರೆ, ತಾವು ಮಾತ್ರ ಈ ರೇಸ್​ನಲ್ಲಿ ಇಲ್ಲ ಎಂದು ಜ್ಯೋತಿರಾದಿತ್ಯ ಸಿಂಧ್ಯಾ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಪಕ್ಷ ಸಂಘಟನಾತ್ಮಕವಾಗಿ ಅತ್ಯಂತ ಇಕ್ಕಟ್ಟಿನ ಹಾದಿಯಲ್ಲಿ ಸಾಗುತ್ತಿದೆ. ಈಗ ಕಾಂಗ್ರೆಸ್​ ತನ್ನನ್ನು ತಾನು ಮರು ಆವಿಷ್ಕರಿಸಿಕೊಂಡು ಹೊಸ ಉತ್ಸಾಹವನ್ನು ಮೈಗೂಡಿಸಿಕೊಂಡು ಜನರ ಬಳಿಗೆ ಹೋಗಬೇಕಾಗಿದೆ. ತನ್ಮೂಲಕ ಅವರೆಲ್ಲರ ವಿಶ್ವಾಸವನ್ನು ಮರುಗಳಿಸಿಕೊಳ್ಳುವ ಕಾಲ ಈಗ ಕೂಡಿ ಬಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *