ಬಿಜೆಪಿ ಸೇರಿದ ಟಾಮ್​ ವಡಕ್ಕನ್​ ದೊಡ್ಡ ನಾಯಕರಲ್ಲ ಬಿಡಿ ಎಂದ ರಾಹುಲ್​ ಗಾಂಧಿ

ನವದೆಹಲಿ: ಕಾಂಗ್ರೆಸ್​ ಪಕ್ಷ ತೊರೆದು ಬಿಜೆಪಿ ಸೇರಿರುವ ಟಾಮ್​ ವಡಕ್ಕನ್​ ದೊಡ್ಡ ನಾಯಕರಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಮೀಡಿಯಾ ಟೀಮ್ ಕಟ್ಟಿ ಅವರಿಗೆ ನೆರವಾಗಿದ್ದ ಪಕ್ಷದ ವಕ್ತಾರ ಟಾಮ್ ವಡಕ್ಕನ್ ಬಿಜೆಪಿ ಸೇರಿರುವುದರಿಂದ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಹುಲ್​ ಅವರು ದೊಡ್ಡ ನಾಯಕರಲ್ಲ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ವಡಕ್ಕನ್​ ಗುರುವಾರ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ವಡಕ್ಕನ್​ ‘ಬಾಲಾಕೋಟ್ ಮೇಲೆ ನಮ್ಮ ವಾಯುಸೇನೆ ವೈಮಾನಿಕ ದಾಳಿ ನಡೆಸಿ ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಿದ ಬಳಿಕ ಕಾಂಗ್ರೆಸ್ ಸೇನೆ, ಸೈನಿಕರ ವಿಶ್ವಾಸಾರ್ಹತೆ ಬಗ್ಗೆಯೇ ಪ್ರಶ್ನೆ ಮಾಡಿದ್ದು ನನ್ನ ಮನಸ್ಸಿಗೆ ತುಂಬ ನೋವನ್ನುಂಟು ಮಾಡಿತು. ರಾಜಕಾರಣ ದೇಶದ ವಿರುದ್ಧ ಮಾಡಬಾರದು’ ಎಂದು ತಿಳಿಸಿದ್ದರು.

ವಂಶಾಡಳಿತದ್ದೇ ಪ್ರಾಬಲ್ಯ

‘ನನ್ನ ಜೀವನದ 20 ವರ್ಷ ಕಾಂಗ್ರೆಸ್​ಗಾಗಿ ನೀಡಿದ್ದೇನೆ. ಆದರೆ, ಅಲ್ಲಿ ಯೂಸ್ ಆಂಡ್ ಥ್ರೋ ಪಾಲಿಸಿ ಇದ್ದು, ವಂಶಾಡಳಿತವೇ ಆವರಿಸಿಕೊಂಡಿದೆ. ವಂಶಾಡಳಿತದಿಂದ ಬೇಸತ್ತು ಹೋಗಿದ್ದೆ. ನನ್ನ ಮುಂದೆ ಆಯ್ಕೆಗಳೇ ಇರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ’ ಎಂದು ವಡಕ್ಕನ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. (ಏಜೆನ್ಸೀಸ್​)