ರಾಹುಲ್ ಕ್ಷೇತ್ರ ಬದಲಾವಣೆ?

>

| ಕೆ. ರಾಘವ ಶರ್ಮ
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ಬದಲು ಮಹಾರಾಷ್ಟ್ರ ಅಥವಾ ತೆಲಂಗಾಣದಿಂದ ಸ್ಪರ್ಧಿಸಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಅಮೇಠಿಯಿಂದ 3 ಬಾರಿ ಆಯ್ಕೆಯಾಗಿರುವ ರಾಹುಲ್​ಗೆ ಇದು ಸುರಕ್ಷಿತ ಕ್ಷೇತ್ರ. ಆದರೆ ರಾಹುಲ್ ಜನಪ್ರಿಯತೆ ದೇಶಾದ್ಯಂತ ಹೆಚ್ಚುತ್ತಿದೆ ಎಂದು ಭಾವಿಸಿರುವ ಕಾಂಗ್ರೆಸ್ ನಾಯಕರು, ಪಕ್ಷಾಧ್ಯಕ್ಷರ ಸ್ಪರ್ಧೆಯ ಪ್ರಭಾವ ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಿಗೂ ಹರಡಿ ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಂತಾಗಬೇಕು. ಹೀಗಾಗಿ ಮಹಾರಾಷ್ಟ್ರ ಅಥವಾ ತೆಲಂಗಾಣವನ್ನು ಅವರು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರಾಹುಲ್ ಆಪ್ತ ವಲಯದಲ್ಲೂ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ತೆಲಂಗಾಣದಿಂದ ಇಬ್ಬರು ಮತ್ತು ಮಹಾರಾಷ್ಟ್ರದಿಂದ (20ರಲ್ಲಿ ಸ್ಪರ್ಧೆ) 4 ಕಾಂಗ್ರೆಸ್ ಸಂಸದರು ಗೆದ್ದಿದ್ದರು.

ನಾಂದೇಡ್​ಗೆ ಬರುತ್ತಾರಾ: ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ರಾಹುಲ್​ರನ್ನು ಕಣಕ್ಕಿಳಿಸುವ ಕುರಿತೂ ಕಾಂಗ್ರೆಸ್ ನಾಯಕರ ಮಧ್ಯೆ ಚರ್ಚೆಯಾಗಿದೆ. ಮರಾಠವಾಡ ಪ್ರದೇಶದ ಪೂರ್ವ ಭಾಗದಲ್ಲಿರುವ ನಾಂದೇಡ್ ಮಹಾರಾಷ್ಟ್ರದ ಔರಂಗಾಬಾದ್ ವಿಭಾಗವನ್ನು ಸಂರ್ಪಸುವ ಜತೆಗೆ ತೆಲಂಗಾಣದ ನಿಜಾಮಾಬಾದ್, ನಿರ್ಮಲ್, ಕಾಮರೆಡ್ಡಿ ಮತ್ತು ಅದಿಲಾ ಬಾದ್ ಜಿಲ್ಲೆಗಳಿಗೂ ಹತ್ತಿರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೈದ್ರಾಬಾದ್ ಕರ್ನಾಟಕದ ಬೀದರ್​ನಿಂದಲೂ ನಾಂದೇಡ್ ಬಹುದೂರವಿಲ್ಲ. ಹೀಗಾಗಿ, ರಾಜ್ಯದ ಹೈ-ಕ ಭಾಗದ ಕ್ಷೇತ್ರಗಳ ಮೇಲೂ ರಾಹುಲ್ ಗಾಂಧಿ ಪ್ರಭಾವ ಬೀರಬಲ್ಲರು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಅತ್ಯಧಿಕ ಲೋಕಸಭೆ ಸೀಟು (80) ಹೊಂದಿರುವ ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರ (48) ಗರಿಷ್ಠ ಸೀಟುಗಳನ್ನು ಹೊಂದಿದೆ.

ಬಿಜೆಪಿಯಿಂದ ಸ್ಮೃತಿ ಇರಾನಿ?

2014ರ ಲೋಕಸಭೆ ಚುನಾವಣೆಗೆ ಅಮೇಠಿಯಿಂದ ಸ್ಪರ್ಧಿಸುವಂತೆ ಸ್ಮೃತಿ ಇರಾನಿಗೆ ಕೊನೆಕ್ಷಣದಲ್ಲಿ ಹೈಕಮಾಂಡ್ ಸೂಚಿಸಿತ್ತು. ಹಾಗಿದ್ದರೂ, 3,00,748 ಮತಗಳನ್ನು ಅವರು ಪಡೆದಿದ್ದರು. ಸುಮಾರು 1 ಲಕ್ಷ ಮತಗಳ ಅಂತರದಲ್ಲಿ ರಾಹುಲ್ ಗೆದ್ದಿದ್ದರು. 2-3 ತಿಂಗಳ ಮೊದಲೇ ಬಂದು ಅಮೇಠಿಯಲ್ಲಿ ಪ್ರಚಾರ ನಡೆಸಿದ್ದರೆ ಸ್ಮೃತಿ ಗೆಲ್ಲುವ ಸಾಧ್ಯತೆಯಿತ್ತು ಎಂದು ಚುನಾವಣೆ ಬಳಿಕ ಅನೇಕರು ಹೇಳಿದ್ದರು. ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಿರುವ ಸ್ಮೃತಿ ಇರಾನಿ, ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದು ಕಾಂಗ್ರೆಸ್ ಆತಂಕಕ್ಕೆ ಕಾರಣ ಎನ್ನಲಾಗಿದೆ.

ಕಾಂಗ್ರೆಸ್​ಗೆ ವರುಣ್?

ಸುಲ್ತಾನ್​ಪುರ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಇತ್ತೀಚೆಗೆ ಸಂಸತ್ತಿನಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಪಕ್ಷದ ಚಟುವಟಿಕೆಗಳಿಂದಲೂ ದೂರವಾಗಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕೂಡ ವರುಣ್ ಗಾಂಧಿಯಿಂದ ಅಂತರ ಕಾಯ್ದುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಏತನ್ಮಧ್ಯೆ, ವರುಣ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಡುವೆ ಸಂಪರ್ಕವಿದ್ದು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ವರುಣ್ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಾಹುಲ್​ರಿಂದ ಅಮೇಠಿ ಕ್ಷೇತ್ರ ತೆರವಾದಲ್ಲಿ, ವರುಣ್ ಗಾಂಧಿ ಇಲ್ಲಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.

ಉತ್ತರ ಪ್ರದೇಶ ಏಕೆ ಬೇಡ?

ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಗೆ ಕಾಂಗ್ರೆಸ್ ಸೇರಿಸಿಕೊಳ್ಳುವ ಸಾಧ್ಯತೆ ಕಡಿಮೆ. ರಾಜ್ಯದ ಅಮೇಠಿ ಮತ್ತು ರಾಯ್ಬರೇಲಿ ಲೋಕಸಭೆ ಕ್ಷೇತ್ರಗಳನ್ನು ಬಿಟ್ಟರೆ ಬೇರೆಲ್ಲೂ ಕಾಂಗ್ರೆಸ್ ಪ್ರಭಾವ ಉಳಿದುಕೊಂಡಿಲ್ಲ. ಉತ್ತರ ಪ್ರದೇಶದ ಬದಲು ಕಾಂಗ್ರೆಸ್​ಗೆ ಹೆಚ್ಚು ಪ್ರಯೋಜನಕಾರಿ ಎನಿಸುವ ರಾಜ್ಯದಲ್ಲಿ ಸ್ಪರ್ಧಿಸುವುದೇ ಸೂಕ್ತವೆಂದು ರಾಹುಲ್ ಗಾಂಧಿ ಆಪ್ತ ವಲಯ ಯೋಚಿಸಿದೆ.

ಕಾಂಗ್ರೆಸ್ ಭದ್ರಕೋಟೆ ನಾಂದೇಡ್

ನಾಂದೇಡ್ ಕ್ಷೇತ್ರವನ್ನು ಕಾಂಗ್ರೆಸ್ ಅತಿ ಹೆಚ್ಚು ಬಾರಿ ಗೆದ್ದುಕೊಂಡಿರುವುದು ಗಮನಾರ್ಹ. 1980ರ ಬಳಿಕ ನಡೆದಿರುವ 11 ಚುನಾವಣೆಗಳಲ್ಲಿ ಒಂಭತ್ತು ಬಾರಿ ಕಾಂಗ್ರೆಸ್ ವಿಜಯ ಸಾಧಿಸಿದ್ದರೆ 1989ರಲ್ಲಿ ಜನತಾದಳ ಮತ್ತು 2004ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದವು.

ಸೋನಿಯಾ ಬದಲು ಪ್ರಿಯಾಂಕಾ ಸ್ಪರ್ಧೆ?

ಪಕ್ಷದ ಅಧ್ಯಕ್ಷ ಸ್ಥಾನವನ್ನು ಪುತ್ರನಿಗೆ ಬಿಟ್ಟುಕೊಟ್ಟ ಬಳಿಕ ದೈನಂದಿನ ರಾಜಕೀಯ ಚಟುವಟಿಕೆಗಳಿಂದ ದೂರವಿರುವ ಸೋನಿಯಾ ಗಾಂಧಿ, ಚುನಾವಣಾ ರಾಜಕೀಯದಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ, ಅವರ ರಾಯ್ಬರೇಲಿ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರಗಳಲ್ಲಿ ರಾಹುಲ್ ಮತ್ತು ಸೋನಿಯಾಗಿಂತ ಹೆಚ್ಚು ಕೆಲಸ ಮಾಡಿದವರು ಪ್ರಿಯಾಂಕಾ. ಎರಡೂ ಕ್ಷೇತ್ರಗಳ ಮತದಾರರೊಂದಿಗೆ ಅನೇಕ ವರ್ಷಗಳಿಂದ ಉತ್ತಮ ಸಂಪರ್ಕದಲ್ಲಿದ್ದುಕೊಂಡು, ಸೋದರ ಮತ್ತು ಅಮ್ಮನ ಗೆಲುವಿಗೆ ಶ್ರಮಿಸಿದ್ದಾರೆ.