ಲಕ್ಷ್ಮೀಗೆ ಕೈ ಕೊಟ್ಟು ಸಿದ್ದು ಆಪ್ತೆಗೆ ಪುಷ್ಪಾಲಂಕಾರ!

ಬೆಂಗಳೂರು/ಮೈಸೂರು: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಬಿ.ಪುಷ್ಪಾ ಅಮರನಾಥ್ ಅವರನ್ನು ನೇಮಕ ಮಾಡಿದ್ದು, ಉತ್ತರ ಕರ್ನಾಟಕ ಭಾಗದಿಂದ ಕಾಂಗ್ರೆಸ್ ಪಾಳಯದಲ್ಲಿ ಶಕ್ತಿಶಾಲಿ ನಾಯಕಿಯಾಗಿ ಬೆಳೆಯುತ್ತಿದ್ದ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವೇಗಕ್ಕೆ ಬ್ರೇಕ್ ಹಾಕಿದೆ.

ಹೊಸ ನೇಮಕದ ಆದೇಶ ಶುಕ್ರವಾರ ಹೊರಬಿದ್ದಿದ್ದು, ರಾಹುಲ್ ಗಾಂಧಿ ಸೂಚನೆಯಂತೆ ಆದೇಶ ಹೊರಡಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಹುಣಸೂರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಸಮೀಪ ಸಂಬಂಧಿಯಾದ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಸಸ್ಯವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವೀಧರೆ. ಅಮೆರಿಕದಲ್ಲಿ ಯಂಗ್ ಸೈಂಟಿಸ್ಟ್ ಪುರಸ್ಕೃತೆ ಕೂಡ. ಮಹಿಳೆಯರು ಬಳಸುವ ನ್ಯಾಪ್ಕಿನ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತಂದಾಗ ಇವರು ಹೋರಾಟದ ನೇತೃತ್ವದ ವಹಿಸಿದ್ದರು.

ಬದಲಾವಣೆಗೆ ಕಾರಣವೇನು?: ಹೆಬ್ಬಾಳ್ಕರ್ ಬದಲಾವಣೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆ ಕಾಂಗ್ರೆಸ್ ನಾಯಕರಾದ ಜಾರಕಿಹೊಳಿ ಸಹೋದರರೊಂದಿಗೆ ಹಣಾಹಣಿ ನಡೆಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿವಾದದ ಕೇಂದ್ರವನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೆ ಬದಲಿಸಲಾಗಿದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ನಿಂತಿದ್ದಕ್ಕೆ ಜಾರಕಿಹೊಳಿ ಸಹೋದರರು ವಿಷಯವನ್ನು ದೊಡ್ಡದಾಗಿಸಿದ್ದರು. ಒಂದು ಹಂತದಲ್ಲಿ ಪಕ್ಷ ಬಿಟ್ಟು ಹೋಗುವ ಮಟ್ಟಕ್ಕೆ ವಿಷಯ ಕೊಂಡೊಯ್ದಿದ್ದರು.

ಜಿಪಂ ಅಧ್ಯಕ್ಷೆಯಾಗಿದ್ದರು: ಪುಷ್ಪಾ ಅಮರನಾಥ್ ಮೈಸೂರಿನ ಹುಣಸೂರು ತಾಲೂಕಿನ ಧರ್ವಪುರ ಜಿಪಂ ಮೀಸಲು ಕ್ಷೇತ್ರದಿಂದ ಕಳೆದ ಅವಧಿಯಲ್ಲಿ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲಿಯೇ ಗೆದ್ದಿದ್ದರು. ಅಲ್ಲದೆ, ರಾಜಕೀಯ ಪ್ರಭಾವ ಬಳಸಿ ಜಿಪಂ ಅಧ್ಯಕ್ಷೆಯಾದರು. 2ನೇ ಅವಧಿಯಲ್ಲಿ ಬನ್ನಿಕುಪ್ಪೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರಾದರೂ ಸಂಖ್ಯಾಬಲ, ಮೀಸಲು ಕೈ ಕೊಟ್ಟಿದ್ದರಿಂದ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು.

ಡಿಕೆಶಿಗೆ ಸಿದ್ದರಾಮಯ್ಯ ಟಾಂಗ್

ಲಕ್ಷ್ಮೀ ಸ್ಥಾನಕ್ಕೆ ಪುಷ್ಪಾ ತರುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಡಿ.ಕೆ.ಶಿವಕುಮಾರ್​ಗೆ ಸರಿಯಾಗಿ ಏಟುಕೊಟ್ಟಿದ್ದಾರೆ ಎಂಬ ಮಾತಿದೆ. ಡಿಸಿಎಂ ಜಿ.ಪರಮೇಶ್ವರ್ ಆದಿಯಾಗಿ ಪ್ರಮುಖ ನಾಯಕರು ತಮ್ಮವರನ್ನೇ ಆಯಕಟ್ಟಿನ ಜಾಗದಲ್ಲಿ ಕೂರಿಸಲು ಪ್ರಯತ್ನ ನಡೆಸಿದ್ದರು. ಈ ಹಂತದಲ್ಲೇ ಸಿದ್ದರಾಮಯ್ಯ ಅವರ ಜಿಲ್ಲೆಯವರಾದ ಪುಷ್ಪಾರಿಗೆ ಅವಕಾಶ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಪುಷ್ಪಾರನ್ನು ಎಐಸಿಸಿ ಸದಸ್ಯರನ್ನಾಗಿ ನೇಮಿಸುವಲ್ಲಿಯೂ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದರು.

ದಲಿತ ಮಹಿಳೆಯನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ. ಹಿರಿಯರ ಮಾರ್ಗದರ್ಶನ ಪಡೆದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಮಾಡುತ್ತೇನೆ.

| ಪುಷ್ಪಾ ಅಮರನಾಥ್, ಕೆಪಿಸಿಸಿ ನೂತನ ಅಧ್ಯಕ್ಷೆ

 

ಶಾಸಕಿಯಾದ ನಂತರ ಈ ಜವಾಬ್ದಾರಿ ಸಾಕೆಂದು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಅವರಿಗೆ ಪತ್ರ ಬರೆದಿದ್ದೆ. ನೂತನ ಆಯ್ಕೆಯಲ್ಲಿ ನನ್ನ ಸಲಹೆಯನ್ನೂ ಕೇಳಲಾಗಿತ್ತು.

| ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ನಿರ್ಗಮಿತ ಅಧ್ಯಕ್ಷೆ