ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ

ದೆಹಲಿ: ಕಾವೇರಿ ಕಣಿವೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಎಐಎಡಿಎಂಕೆ ನಾಯಕರು ಗುರುವಾರ ಬೆಳಗ್ಗೆ ದೆಹಲಿಯ ಸಂಸತ್​ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

‘ಕಾವೇರಿ ಉಳಿಸಿ’, ‘ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬಾರದು’ ಎಂಬ ಸಂದೇಶವುಳ್ಳ ಫಲಕಗಳನ್ನು ಹಿಡಿದು ನಾಯಕರು ಪ್ರತಿಭಟನೆ ನಡೆಸಿದರು.

ಮೆಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್​) ಸಿದ್ಧಪಡಿಸಲು ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕಕ್ಕೆ ಅನುಮತಿ ನೀಡಿದೆ. ಇದನ್ನು ವಿರೋಧಿಸಿರುವ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಕಾವೇರಿ ಕಣಿವೆಯಲ್ಲಿ ಕರ್ನಾಟಕ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರಲಾರಂಭಿಸಿದೆ.

ಈಗಾಗಲೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಎಐಎಡಿಎಂಕೆ ನಾಯಕರು ಈ ಬಗ್ಗೆ ಮನವಿಯನ್ನೂ ಮಾಡಿದ್ದಾರೆ.

ಕುಡಿಯುವ ನೀರು ಮತ್ತು ವಿದ್ಯುತ್​ ಉತ್ಪಾದನೆಯ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಮೆಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಪ್ರಾಥಮಿಕ ಒಪ್ಪಿಗೆಯೂ ಸಿಕ್ಕಿದ್ದು, ಕೇಂದ್ರ ಸರ್ಕಾರ ಸಮಗ್ರ ಯೋಜನಾ ವರದಿಯನ್ನು ಕೇಳಿದೆ. ಈಗಾಗಲೇ ಕೇಂದ್ರದ ಅಧಿಕಾರಿಗಳು, ಸಚಿವ ಡಿ.ಕೆ ಶಿವಕುಮಾರ್​ ಸೇರಿದಂತೆ ಪ್ರಮುಖರು ಸ್ಥಳ ಪರಿಶೀಲನೆಯನ್ನೂ ಮಾಡಿದ್ದಾರೆ.