ಬೆಂಗಳೂರು: ರಾಜ್ಯದ 2025ರ ಮಾಹಿತಿ-ಜೈವಿಕ ತಂತ್ರಜ್ಞಾನಕ್ಕೆ ಮಾರ್ಗದರ್ಶನ ಪಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ)ದ ಪ್ರಭಾವ ನಿರ್ಣಯಿಸಲು ಸಮಗ್ರ ಅಧ್ಯಯನ ನಡೆದಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಎಐ ಕಾರ್ಯಪಡೆ ಸಾಧ್ಯತೆಗಳ ಬಗ್ಗೆಯೂ ಅವಲೋಕಿಸಲಾಗುತ್ತಿದೆ. ಹೊಸ ಐಟಿಬಿಟಿ ನೀತಿಯ ಸ್ವರೂಪ ತಿಳಿಯುವ ಜತೆಗೆ ರಾಜ್ಯ ಸರ್ಕಾರದ ಪ್ರಮುಖ ಕೌಶಲ ಉಪಕ್ರಮವಾದ ನಿಪುಣ ಕರ್ನಾಟಕ ಕಾರ್ಯತಂತ್ರಗಳನ್ನು ರೂಪಿಸುವ ಗುರಿ ಹೊಂದಿದೆ ಎಂದಿದ್ದಾರೆ.
ಎಐ ಹಾಗೂ ಬಿಗ್ ಡೇಟಾ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕವಾಗಿ ಬೆಂಗಳೂರು ಐದನೇ ಸ್ಥಾನದಲ್ಲಿ
ಗಳಿಸಿಕೊಂಡಿದೆ. ಬೆಂಗಳೂರು ಸೇರಿ ಕರ್ನಾಟಕ ಒಂದು ಲಕ್ಷ ಎಐ ವೃತ್ತಿಪರರಿಗೆ ನೆಲೆಯೊದಗಿಸಿದೆ. ಈ ತಾಂತ್ರಿಕ ಪ್ರಯಾಣ ಮುನ್ನಡೆಸಿ ಭವಿಷ್ಯದ ಸಮಗ್ರ ಬೆಳವಣಿಗೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
ಕೈಗಾರಿಕೆಗಳನ್ನು ಎಐ ಮರು ರೂಪಿಸುತ್ತಿರುವ ಕಾರಣ ನಾವು ಹಿಂದೆ ಬೀಳದಂತೆ ನೋಡಿಕೊಳ್ಳಲು, ನಿಪುಣ ಕರ್ನಾಟಕದಡಿ ಕೌಶಲ ಹೂಡಿಕೆಗಳಿಗೆ ಮಾರ್ಗದರ್ಶನ, ನಮ್ಮ ಪ್ರತಿಭೆಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವ ನಿರ್ಣಾಯಕ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಉದ್ಯಮ ನಾಯಕರು ತಮ್ಮ ಅಭಿಪ್ರಾಯ ಹಾಗೂ ಒಳನೋಟಗಳನ್ನು ಹಂಚಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.