ಬೆಂಗಳೂರು: ಅತಿ ಹಿಂದುಳಿದ ಗಾಣಿಗ ಸಮುದಾಯದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಗೆ ನಿಗದಿಯಾಗಿರುವ ಅನುದಾನವನ್ನು ತಡೆ ಹಿಡಿಯಲಾಗಿದೆ. ‘ಅಹಿಂದ’ ಸ್ವಾರ್ಥ ಸಾಧನೆಗೆ ಬಳಕೆಯ ಅಸ್ತ್ರ ಎನ್ನುವುದು ರುಜುವಾತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮತ ಗಳಿಕೆ ಹಾಗೂ ಅಧಿಕಾರ ಗಳಿಸಲು ಮಾತ್ರ ಹಿಂದುಳಿದವರ ಜಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದುವರೆಗೂ ಹಿಂದುಳಿದ ಸಮುದಾಯಗಳಿಗೆ ಮಹತ್ವದ ಕೊಡುಗೆ ಕೊಟ್ಟ ಯಾವ ಉದಾಹರಣೆಯೂ ಇಲ್ಲ, ಅದರಲ್ಲೂ ಅತಿ ಹಿಂದುಳಿದ ಕಾಯಕ ಸಮುದಾಯಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದವರ ಕಲ್ಯಾಣ ಕಾರ್ಯ ಹಾಗಿರಲಿ, ಅವರಿಗೆ ನೀಡುವ ಅನುದಾನಕ್ಕೂ ಕತ್ತರಿ ಪ್ರಯೋಗವಾಗುತ್ತಿರುವುದು ವಿಪರ್ಯಾಸವೇ ಸರಿ ಎಂದು ಬಿ.ವೈ.ವಿಜಯೇಂದ್ರ ಕುಟುಕಿದ್ದಾರೆ.
ಸಚಿವ ತಂಗಡಗಿ ಉಪದ್ರವ
ಅತೀ ಹಿಂದುಳಿದ ಕಾಯಕ ಶ್ರೇಷ್ಠ ಸಮಾಜವಾಗಿರುವ ಗಾಣಿಗ ಸಮಾಜಕ್ಕೆ ಸೇರಿದ ತೈಲೇಶ್ವರ ಗಾಣಿಗ ಸಮಾಜದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ತಡೆ ಹಿಡಿಯಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಉಪದ್ರವ ಕೊಡುತ್ತಿರುವುದು ಸಾಮಾಜಿಕ ನ್ಯಾಯ ಪಠಿಸುವ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಬಯಲು ಮಾಡಿದೆ ಎಂದು ಕಿಡಿಕಾರಿದ್ದಾರೆ.
ಪೂರ್ಣಾನಂದಪುರಿ ಸ್ವಾಮೀಜಿಗಳು ಪೂರ್ವಾಶ್ರಮದಲ್ಲಿ ಮಾಜಿ ಸಚಿವರಾಗಿದ್ದವರು, ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ಸಮಾಜಗಳಿಗಾಗಿ ಪರಿಶ್ರಮಿಸಿದವರು ಎಂದು ಹೇಳಿದ್ದಾರೆ.
ಇದೀಗ ಸರ್ವಸಂಗ ಪರಿತ್ಯಾಗಿಗಳಾಗಿ ಸನ್ಯಾಸತ್ವ ಸ್ವೀಕರಿಸಿ ಗಾಣಿಗ ಸಮುದಾಯದ ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಗತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಶ್ರೀಮಠ ಅಭಿವೃದ್ಧಿಪಡಿಸಲು ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದಾರೆ.
ಇಂತಹ ನೈಜ ಕಾಳಜಿಯುಳ್ಳ ಶ್ರೀಗಳ ಕೋರಿಕೆಯನ್ನು ಅಲಕ್ಷಿಸುತ್ತಿರುವ ಈ ಸರ್ಕಾರ ಘೋಷಣೆ ಮಾಡಿರುವ ಅನುದಾನವನ್ನೂ ಬಿಡುಗಡೆ ಮಾಡದೆ ಕಿರುಕುಳ ನೀಡುತ್ತಿದೆ. ಇದನ್ನು ನೋಡಿದರೆ ಅತಿ ಹಿಂದುಳಿದ ಕಾಯಕ ಸಮುದಾಯಗಳನ್ನು ಅಪಮಾನಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಂತೆ ಕಾಣುತ್ತಿದೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಶೋಷಣೆಯಾಗುತ್ತಿರುವ ಪರಿ ‘ಅಹಿಂದ ಎನ್ನುವುದು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ಅಸ್ತ್ರವಾಗಿದೆ ಎಂಬ ವಾಸ್ತವ ಅಸಂಘಟಿತ ಹಿಂದುಳಿದ ವರ್ಗಗಳಿಗೆ ಮನನವಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಈ ಕೂಡಲೇ ತಡೆ ಹಿಡಿದಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಬೇಕು. ಅತಿ ಹಿಂದುಳಿದ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ವಿಶ್ವ ಗಾಣಿಗ ಶ್ರೀಮಠಕ್ಕೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.