ಮೋದಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾರ್ವಜನಿಕ ಹಣ ಬಳಕೆ ಆಗಲಿಲ್ಲವೇ?

ಮೈಸೂರು: ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ದೇಶ-ವಿದೇಶಗಳ ಗಣ್ಯರನ್ನು ಆಹ್ವಾನಿಸಿದ್ದರು. ಅದಕ್ಕೆ ಸಾರ್ವಜನಿಕರ ಹಣ ಬಳಕೆಯಾಗಲಿಲ್ಲವೇ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜೆಡಿಎಸ್​ ಅಧ್ಯಕ್ಷ ವಿಶ್ವನಾಥ್​, ಮುಖ್ಯಮಂತ್ರಿಗಳ ಪ್ರಮಾಣ ವಚನಕ್ಕೆ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದರು. “ಪ್ರಧಾನಿಯ ಪ್ರಮಾಣವಚನಕ್ಕೆ ಆಹ್ವಾನಿಸಿದ್ದ ದೇಶ-ವಿದೇಶದ ಅತಿಥಿಗಳಿಗೆ ಬಳಕೆಯಾಗಿದ್ದೂ ಸಾರ್ವಜನಿಕ ಹಣವೇ ಅಲ್ಲವೇ,”ಎಂದು ಅವರು ಹೇಳಿದರು.

ಇನ್ನು ಕಾಂಗ್ರೆಸ್​ ಬಗ್ಗೆಯೂ ಸಣ್ಣ ಪ್ರಮಾಣದ ಅಸಮಾಧಾನ ಹೊರಹಾಕಿದ ವಿಶ್ವನಾಥ್​, “ಕಾಂಗ್ರೆಸ್​ ಪಕ್ಷದವರೆ ನೀವು ಸೆಕ್ಯೂಲರ್ ಆಗಿಯೇ ಇರಿ. ನಮ್ಮನ್ನು ಬಿಜೆಪಿಯ ‘ಬಿ’ ಟೀಮ್ ಎಂದು ಕರೆದಿರಿ. ಆದರೆ, ನಾವು ಬಿಜೆಪಿ ಜತೆಗೆ ಹೋಗಿ ಸರ್ಕಾರ ರಚನೆ ಮಾಡಲಿಲ್ಲ,” ಎಂದರು.
ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಮಾತಿನ ಸರ್ಕಾರವಾಗಿದೆ. ಆಕಾಶವಾಣಿ, ದೂರದರ್ಶನದ ಮೂಲಕ ಈ ಸರ್ಕಾರ ಮಾತನಾಡುತ್ತಿದೆ. ಸ್ವಾತಂತ್ರ್ಯಾ ನಂತರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಸರ್ವಾಧಿಕಾರಿ ಹೆಜ್ಜೆ ಇಡುತ್ತಿದೆ. ಪ್ರಮುಖ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಸಂಬಂಧ ಪಟ್ಟ ಖಾತೆಯ ಸಚಿವರಿಗೆ ಮಾಹಿತಿಯೇ ಇಲ್ಲ. ಮೋದಿ ಸಾಗುತ್ತಿರುವ ದಾರಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಹೊಂದುತ್ತಿಲ್ಲ ಎಂದು ಹರಿಹಾಯ್ದರು.

ಇನ್ನು ಪ್ರಾದೇಶಿಕ ಪಕ್ಷಗಳ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ” ಭಾರತದ ರಾಜಕಾರಣ ಪ್ರಾಂತೀಯ ಪಕ್ಷಗಳತ್ತ ಒಲವು ತೋರುತ್ತಿದೆ. ಜೆಡಿಎಸ್ ಒಂದು ಪ್ರಾಂತೀಯ ಪಕ್ಷವಾಗಿ ಕರ್ನಾಟಕದಲ್ಲಿ ಉಳಿದುಕೊಂಡಿದೆ. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಂಗಾರಪ್ಪ ಕಟ್ಟಿದ ಪಕ್ಷಗಳು ಉಳಿಯಲಿಲ್ಲ. ಜೆಡಿಎಸ್ ರೈತರ ಪರವಾಗಿರುವ ಕಾರಣಕ್ಕೆ ಕರ್ನಾಟಕದಲ್ಲಿ ಉಳಿದುಕೊಂಡಿದೆ,” ಎಂದು ಪ್ರತಿಪಾದಿಸಿದರು.