ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು ಎಂದು ವಿಶ್ವನಾಥ್​ ಹಾಡಿದ್ದೇಕೆ?

ಬೆಂಗಳೂರು: ಬಿಜೆಪಿ ಏನೇ ಪ್ರಯತ್ನ ಮಾಡಿದರೂ ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿ ಹೋಗಲ್ಲ. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂದು ಹಾಡೇ ಇದೆಯಲ್ಲ. ಹಾಗೆ ನಮ್ಮ ಸರ್ಕಾರ ಏನೇ ಮಾಡಿದರೂ ಉರುಳಿಹೋಗದು ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎ.ಎಚ್​ ವಿಶ್ವನಾಥ್​ ಹೇಳಿದ್ದಾರೆ.

ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ವಿಶ್ವನಾಥ್​, ಕೇಂದ್ರ ಸರ್ಕಾರ ತಮ್ಮ ವಿರೋಧಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಜಾರಿ ನಿರ್ದೇಶನಾಲಯ (ಇ.ಡಿ.), ಆದಾಯ ತೆರಿಗೆ ಇಲಾಖೆ (ಐಟಿ)ಯನ್ನು ಬಳಸಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ. ಕೇಂದ್ರ ಸರ್ಕಾರದ ವಿತ್ತ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ವಿಭಾಗಗಳು ಸಂಪೂರ್ಣವಾಗಿ ದುರ್ಬಳಕೆಯಾಗಿವೆ. ಈ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬೀಳಿಸುವ ಬಿಜೆಪಿಯ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ.ಐದು ವರ್ಷ ಮೈತ್ರಿ ಸರ್ಕಾರ ಸುಭದ್ರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಇನ್ನು ಸಿದ್ದರಾಮಯ್ಯ ಅವರಿಂದ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿ ಆರಾಮಾಗಿದ್ದಾರೆ. ಅವರು ಸರ್ಕಾರವನ್ನು ಬೀಳಿಸುವುದಿಲ್ಲ,” ಎಂದರು.

ಡಿ.ಕೆ.ಶಿಕುಮಾರ್​ ಅವರ ವಿರುದ್ಧ ಜಾರಿ ನಿರ್ದೇಶನಾಲಯದಿಂದ(ಇ.ಡಿ.) ತನಿಖೆ ನಡೆಯುತ್ತಿದೆ ಎಂಬ ಪತ್ರತರ್ಕರು ಗಮನ ಸೆಳೆದಾಗ,” ನಾವು ಡಿ.ಕೆ. ಶಿವಕುಮಾರ್ ಪರ, ಇನ್ಯಾರ ಪರವೂ ಅಲ್ಲ. ಅನ್ಯಾಯದ ವಿರುದ್ಧ ನಮ್ಮ ಹೋರಾಟ. ಡಿಕೆಶಿ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಭಾಗ. ಹಾಗಾಗಿ ನಾವು ಅನ್ಯಾಯದ ವಿರುದ್ಧ ನಿಲ್ಲುತ್ತೇವೆ,” ಎಂದರು.

ವೈಶಂಪಾಯನ ಸರೋವರದಲ್ಲಿ ಕುಳಿತಿದ್ದಾರೆಯೇ ಯಡಿಯೂರಪ್ಪ?

ಪೆಟ್ರೋಲ್​ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇದೇ 10ರಂದು ನಡೆಯಲಿರುವ ಭಾರತ್​ ಬಂದ್​ಗೆ ಜೆಡಿಎಸ್​ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದ ವಿಶ್ವನಾಥ್​, ಇದೇ ವೇಳೆ ಬಿಜೆಪಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್​ ಬೆಲೆ ಏರಿಕೆಯಾಗಿದ್ದಾಗ ಬಿಜೆಪಿ ರಾಷ್ಟ್ರಾದ್ಯಂತ ಹೋರಾಟ ಮಾಡಿತ್ತು. ಅಡುಗೆ ಅನಿಲ ಬೆಲೆ ಏರಿದಾಗ ಎತ್ತಿನಬಂಡಿ ಎಳೆದು ಸದಾನಂದಗೌಡ, ಶೋಭಾ ಕರಂದ್ಲಾಜೆ, ಸಂಸದ ನಳೀನ್ ಕುಮಾರ್ ಕಟೀಲು ಪ್ರತಿಭಟನೆ ಮಾಡಿದ್ದರು. ಈಗ ಎಲ್ಲಿದ್ದಾರೆ ಇವರೆಲ್ಲ? ಯಡಿಯೂರಪ್ಪ ನವರು ವೈಶಂಪಾಯನ ಸರೋವರದಲ್ಲಿ ಕುಳಿತಿದ್ದಾರಾ? ಈಗ ಬಿಡುವಾಗಿದ್ದಾರೆ ಬರಲಿ ನಮ್ಮ ಜತೆಗೆ ಹೋರಾಟ ಮಾಡಲಿ ಎಂದರು.

 

Leave a Reply

Your email address will not be published. Required fields are marked *