ಭಾರತದ ವಶಕ್ಕೆ ಅಗಸ್ತಾ ಆರೋಪಿ

ದುಬೈ: ಯುಪಿಎ ಸರ್ಕಾರದ ಅವಧಿಯಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ತನಿಖೆಯಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ. ಹಗರಣದ ಮಧ್ಯವರ್ತಿ ಹಾಗೂ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಶೆಲ್​ನನ್ನು ದುಬೈ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ.

ಮಿಶೆಲ್​ನನ್ನು ವಿಶೇಷ ವಿಮಾನದ ಮೂಲಕ ದುಬೈನಿಂದ ಮಂಗಳವಾರ ರಾತ್ರಿ ನವದೆಹಲಿಗೆ ಕರೆ ತರಲಾಗಿದೆ. ತಕ್ಷಣವೇ ಸಿಬಿಐ ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ದೆಹಲಿಯ ಪಟಿಯಾಲಾ ಕೋರ್ಟ್ ಎದುರು ಬುಧವಾರ ಹಾಜರು ಪಡಿಸಲಿದೆ. ಪ್ರಕರಣದ ವಿಚಾರಣೆಗಾಗಿ ಮಿಶೆಲ್​ನನ್ನು ವಶಕ್ಕೆ ನೀಡುವಂತೆ ಕೋರ್ಟ್​ಗೆ ಸಿಬಿಐ ಮನವಿ ಮಾಡಲಿದೆ. ಅಗಸ್ತಾ ವೆಸ್ಟ್​ಲ್ಯಾಂಡ್ ಪ್ರಕರಣದಲ್ಲಿ ಹಲವು ಕಾಂಗ್ರೆಸ್ ನಾಯಕರು, ಅಂದಿನ ಸರ್ಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಆರೋಪವಿದೆ. ಕ್ರಿಶ್ಚಿಯನ್ ಮಿಶೆಲ್ ವಿಚಾರಣೆ ಬಳಿಕ ಇನ್ನಷ್ಟು ಪ್ರಮುಖ ಆರೋಪಿಗಳ ಹೆಸರು ಬೆಳಕಿಗೆ ಬರುವ ಸಾಧ್ಯತೆಯಿದೆ. ಮಿಶೆಲ್ ಹೇಳಿಕೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿದೆ. ಮಿಶೆಲ್ ಹಸ್ತಾಂತರಕ್ಕೆ ದುಬೈ ಅಧೀನ ನ್ಯಾಯಾಲಯ ಸೆ. 2ರಂದು ಸಮ್ಮತಿಸಿತ್ತು. ಈ ಆದೇಶ ಪ್ರಶ್ನಿಸಿ ಅಲ್ಲಿನ ಸುಪ್ರೀಂ ಕೋರ್ಟ್​ನಲ್ಲಿ ಮಿಶೆಲ್ ಪರ ವಕೀಲ ಅರ್ಜಿ ಸಲ್ಲಿಸಿದ್ದರು. ನ.19ರಂದು ಸುಪ್ರೀಂಕೋರ್ಟ್ ಕೂಡ ಗಡಿಪಾರಿಗೆ ಅನುಮತಿ ನೀಡಿತ್ತು.

ಬಹಿರಂಗವಾಗುತ್ತಾ ಕೋಡ್​ವರ್ಡ್?

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ, ವಾಯುಸೇನೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ, ಅಹ್ಮದ್ ಪಟೇಲ್ ವಿರುದ್ಧ ಆರೋಪ ಕೇಳಿಬಂದಿದೆ. ಲಂಚ ಸಲ್ಲಿಕೆಯಾಗಿರುವುದನ್ನು ಕೋಡ್​ವರ್ಡ್​ಗಳಲ್ಲಿ ನಮೂದಿಸಿರುವ ಡೈರಿ ಈಗಾಗಲೇ ಸಿಬಿಐಗೆ ಸಿಕ್ಕಿದೆ. ಕೋಡ್​ವರ್ಡ್​ಗಳನ್ನು ಮಿಶೆಲ್ ಬಹಿರಂಗಪಡಿಸಿದರೆ ರಾಜಕೀಯ ಸಂಚಲನ ಉಂಟಾಗುವುದು ಖಚಿತ.