ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ​: ಆರೋಪಿ ಕ್ರಿಶ್ಚಿಯನ್ ಜೇಮ್ಸ್​ ಮೈಕೆಲ್​ ಭಾರತಕ್ಕೆ ಹಸ್ತಾಂತರ

ನವದೆಹಲಿ: ಅಗಸ್ಟಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮಧ್ಯವರ್ತಿ ಕ್ರಿಶ್ಚಿಯನ್​ ಜೇಮ್ಸ್​ ಮೈಕೆಲ್ ದುಬೈನಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದು, ಅಧಿಕಾರಿಗಳು ಬಹುತೇಕ ಇಂದು ರಾತ್ರಿ ಆತನನ್ನು ಭಾರತಕ್ಕೆ ಕರೆತರುವ ಸಾಧ್ಯತೆಗಳಿವೆ.

ತನಿಖೆ ಅಂಗವಾಗಿ ಭಾರತಕ್ಕೆ ಮೈಕೆಲ್​ನನ್ನು ಹಸ್ತಾಂತರಿಸುವ ಬಗ್ಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ದುಬೈ ಕೋರ್ಟ್​ ಎತ್ತಿ ಹಿಡಿದಿತ್ತು. ಅಲ್ಲದೆ ತನ್ನನ್ನು ಭಾರತಕ್ಕೆ ಒಪ್ಪಿಸಬಾರದು ಎಂದು ಮೈಕೆಲ್​ ಸಲ್ಲಿಸಿದ್ದ ಅರ್ಜಿಯನ್ನು ದುಬೈ ನ್ಯಾಯಾಲಯ ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ದುಬೈನ ಅಪರಾದ ತನಿಖಾ ವಿಭಾಗ ತನ್ನ ವಶಕ್ಕೆ ಪಡೆದುಕೊಂಡಿತ್ತು.

ಹೀಗಾಗಿ ಎರಡು ದಿನಗಳ ಹಿಂದೆಯೇ ದುಬೈಗೆ ತೆರಳಿರುವ ಭಾರತದ ಅಧಿಕಾರಿಗಳು, ಆತನನ್ನು ವಶಕ್ಕೆ ಪಡೆಯುವ ಕಾನೂನು ಕ್ರಮಗಳನ್ನೆಲ್ಲ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಮೈಕೆಲ್​ ಭಾರತಕ್ಕೆ ಹಸ್ತಾಂತರಗೊಂಡಿದ್ದು, ದುಬೈ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕೃತವಾಗಿ ಮೈಕೆಲ್​ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೆಲ ತಿಂಗಳ ಹಿಂದೆ ಗಲ್ಫ್​ ದೇಶವನ್ನು ಕೋರಿತ್ತು. ಅಲ್ಲದೆ, ಇಂಟರ್​ ಪೋಲ್​ ಕೂಡ ರೆಡ್​ ಕಾರ್ನರ್ ನೋಟಿಸ್​ ಹೊರಡಿಸಿತ್ತು. ಜೂನ್​ 2016ರಲ್ಲಿ ಇಡಿ ದೋಷಾರೋಪ ಪಟ್ಟಿಯಲ್ಲಿ ಮೈಕೆಲ್​ರನ್ನು ಆರೋಪಿಯಾಗಿಸಿತ್ತು. ಒಪ್ಪಂದದಲ್ಲಿ ಭಾಗಿಯಾಗಿದ್ದ ಮೂವರು ಮಧ್ಯವರ್ತಿಗಳಲ್ಲಿ ಒಬ್ಬನಾಗಿದ್ದ ಮೈಕೆಲ್​ 30 ಮಿಲಿಯನ್​ ಯೂರೋಗಳು ಅಂದರೆ, ಸುಮಾರು 225 ಕೋಟಿ ರೂ. ಗಳನ್ನು ಪಡೆದಿದ್ದ ಎಂದು ಆರೋಪಿಸಲಾಗಿದೆ.