ಅಗಸ್ತಾ ವೆಸ್ಟ್​ಲ್ಯಾಂಡ್ ಹಗರಣ: ಆರೋಪಿ ಕ್ರಿಶ್ಚಿಯನ್ ಮಿಶೆಲ್ 5 ದಿನ ಸಿಬಿಐ ವಶಕ್ಕೆ

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಹಾಗೂ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಶೆಲ್ (54)​ನನ್ನು ಪಟಿಯಾಲ ಹೌಸ್​ ಕೋರ್ಟ್‌ ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ವಿಶೇಷ ವಿಮಾನದ ಮೂಲಕ ದುಬೈನಿಂದ ಮಂಗಳವಾರ ರಾತ್ರಿ ನವದೆಹಲಿಗೆ ಕರೆತಂದ ಮಿಶೆಲ್‌ನನ್ನು ವಶಕ್ಕೆ ಪಡೆದಿದ್ದ ಸಿಬಿಐ ರಾತ್ರಿಯಿಡೀ ವಿಚಾರಣೆ ನಡೆಸಿ ಇಂದು ಮಧ್ಯಾಹ್ನವಷ್ಟೇ ಪಟಿಯಾಲ ಹೌಸ್ ಕೋರ್ಟ್‌ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 14 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿತ್ತು.

ಕೆಲವು ಪ್ರಮುಖ ದಾಖಲೆಗಳೊಂದಿಗೆ ಆತನೊಂದಿಗೆ ವಿಚಾರಣೆ ನಡೆಸಬೇಕಾಗಿದೆ. ಈಗಾಗಲೇ ದುಬೈ ಮೂಲದ ಎರಡು ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಹಾಗಾಗಿ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಸಿಬಿಐ ವಾದಿಸಿತ್ತು.

ಮಿಶೆಲ್‌ ಪರ ವಕೀಲ, ಮಿಶೆಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಅರ್ಜಿ ಸಲ್ಲಿಸಿದರು ಮತ್ತು ಜಾಮೀನಿಗಾಗಿ ಮನವಿ ಸಲ್ಲಿಸಿದರು. ಆದರೆ, ನ್ಯಾಯಾಲಯ ಡಿ. 10ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಜಾಮೀನು ಅರ್ಜಿ ಕೈಗೆತ್ತಿಕೊಳ್ಳಲಿರುವುದಾಗಿ ತಿಳಿಸಿದೆ. ಆದರೆ, ಪ್ರತಿನಿತ್ಯ ಎರಡು ಗಂಟೆ ಕಾಲ ತಮ್ಮ ವಕೀಲರನ್ನು ಭೇಟಿ ಮಾಡಲು ಮಿಶೆಲ್​ಗೆ ನ್ಯಾಯಾಲಯ ಅನುಮತಿ ನೀಡಿದೆ.

ವಿವಿಐಪಿಗಳ ಸಂಚಾರಕ್ಕಾಗಿ 2010ರಲ್ಲಿ ಅಮೆರಿಕದ ಅಗಸ್ತಾ ವೆಸ್ಟ್‌ಲ್ಯಾಂಡ್‌ ಕಂಪನಿಯ 12 ಹೆಲಿಕಾಪ್ಟರ್‌ಗಳ ಖರೀದಿಗಾಗಿ 3,600 ಕೋಟಿ ಒಪ್ಪಂದವಾಗಿತ್ತು. ಈ ವೇಳೆ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ಮಧ್ಯವರ್ತಿಯಾಗಿದ್ದ ಮಿಶೆಲ್‌ ಲಂಚದ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. (ಏಜೆನ್ಸೀಸ್)

ಅಗಸ್ತಾ ಹಗರಣದ ಮಧ್ಯವರ್ತಿ ಬಾಯ್ಬಿಟ್ಟರೆ ಇನ್ನೂ ಏನೇನು ರಹಸ್ಯಗಳು ಬರುತ್ತವೋ ..?

ಭಾರತದ ವಶಕ್ಕೆ ಅಗಸ್ತಾ ಆರೋಪಿ