ಆಗುಂಬೆ ದುರಸ್ತಿ ಕಾಮಗಾರಿ ಪೂರ್ಣ

>>

ಅವಿನ್ ಶೆಟ್ಟಿ ಉಡುಪಿ
ಮಲೆನಾಡು- ಕರಾವಳಿಯ ಮೂರು ಜಿಲ್ಲೆಗಳನ್ನು ಸಂಪರ್ಕಿಸುವ ಶಿವಮೊಗ್ಗ- ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಮೇ 16ರಂದು ಲಘುವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
[

ಕಳೆದ ಮಳೆಗಾಲದಲ್ಲಿ ಕುಸಿದಿರುವ ಘಾಟಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ಏ.1ರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ಆರಂಭಿಸಲಾಗಿದ್ದು, ಈಗ ಏಳನೇ ತಿರುವು ಹೊರತುಪಡಿಸಿ ಉಳಿದ ಕಡೆ ತಡೆಗೋಡೆ ಹಾಗೂ ಕಾಂಕ್ರೀಟ್ ಕೆಲಸ ಪೂರ್ಣಗೊಂಡಿದೆ.

ಒಂದು ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿಗೆ ವನ್ಯಜೀವಿ ನಿಯಮಾವಳಿ ತೊಡಕುಂಟಾಗಿದ್ದರಿಂದ ವಿಳಂಬವಾಗಿತ್ತು, ಮಳೆಗಾಲದ ಒಳಗೆ ಕಾಮಗಾರಿ ಮುಗಿಯದಿದ್ದರೆ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುವುದರಿಂದ ಅಗತ್ಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಘಾಟಿಯ 14ನೇ ತಿರುವಿನ ಸೂರ್ಯಾಸ್ತಮಾನ ಗೋಪುರ ಬಳಿ ಕುಸಿದಿದ್ದ ಜಾಗದಲ್ಲಿ ತಡೆಗೋಡೆಯೊಂದಿಗೆ ರಸ್ತೆಗೆ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಾಣ ಕೆಲಸ ಕೆಲಸ ನಡೆದಿದೆ. 15 ದಿನಗಳ ಹಿಂದೆ ಎಲ್ಲ ಕಾಮಗಾರಿ ಮುಗಿಸಲಾಗಿದ್ದು, ಪ್ರಸಕ್ತ ಕ್ಯೂರಿಂಗ್ ನಡೆಸಲಾಗುತ್ತಿದೆ.

ಆನೆಬಂಡೆ ಕಾಮಗಾರಿ ವಿಳಂಬ: ಆನೆಬಂಡೆ ರಸ್ತೆಯ ಕಾಮಗಾರಿ ವಿಳಂಬವಾದ ಕಾರಣ ಇಷ್ಟು ದೀರ್ಘ ಸಮಯ ಘಾಟಿ ರಸ್ತೆಯನ್ನು ಬಂದ್ ಮಾಡಬೇಕಾಯಿತು. ಏ.1ರಿಂದ ಕಾಮಗಾರಿ ಆರಂಭಿಸಿದರೂ ಈ ಜಾಗದಲ್ಲಿ ವ್ಯವಸ್ಥಿತ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಡ್ಡಿಪಡಿಸಿದ್ದು ವಿಳಂಬ ಪ್ರಮುಖ ಕಾರಣ. ಯಂತ್ರಗಳು, 30 ಕಾರ್ಮಿಕರು ಕಾಮಗಾರಿಗೆ ಸಿದ್ಧರಾಗಿದ್ದರೂ ಸಂಚಾರ ನಿಷೇಧದ ದಿನದಿಂದ ವಾರದ ಬಳಿಕವಷ್ಟೇ ಕಾಮಗಾರಿ ಆರಂಭಿಸಲು ಸಾಧ್ಯವಾಗಿತ್ತು.

7ನೇ ತಿರುವಿನ ಕೆಲಸವಾಗಿಲ್ಲ: ಘಾಟಿಯ 7 ತಿರುವಿನಲ್ಲಿ ಮಾಡಬೇಕಿದ್ದ ರಸ್ತೆಯ ತಡೆಗೋಡೆ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಿದೆ ಎಂಬ ಮಾಹಿತಿ ಇದೆ. ಈ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಡೆಗೋಡೆಗೆ ಸುಮಾರು 10 ಮೀಟರ್ ತಳಭಾಗದಿಂದ ಫೌಂಡೇಶನ್ ನಿರ್ಮಿಸಬೇಕಾಗಿದೆ. ಅನಿವಾರ್ಯವಾಗಿ ಕೆಲವು ಮರಗಳನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಫೌಂಡೇಶನ್ ನಿರ್ಮಿಸುವುದು ಅಸಾಧ್ಯ. ಇದಕ್ಕೆ ಅರಣ್ಯ ಇಲಾಖೆ ನಿಯಮಾವಳಿಗಳು ತಡೆಯಾಗಿವೆ. ಮಳೆಗಾಲ ಸಮೀಪಿಸುತ್ತಿರುವ ಕಾರಣ ಈ ಕಾಮಗಾರಿಯನ್ನು ಮಳೆಗಾಲ ಮುಂಚಿತವಾಗಿ ಮುಗಿಸುವುದು ಅಸಾಧ್ಯವಾಗಿದ್ದು, ಆದ್ದರಿಂದ ಇದನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ಜೂನ್ 1ರ ನಂತರ ಘನವಾಹನ ಸಂಚಾರ: ಸದ್ಯಕ್ಕೆ ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಆನೆಬಂಡೆ ಬಳಿ ಕಾಂಕ್ರೀಟ್ ರಸ್ತೆ ಕ್ಯೂರಿಂಗ್ ನಡೆಯುತ್ತಿರುವುದರಿಂದ ಘನ ವಾಹನ ಸಂಚಾರದಿಂದ ಸ್ಲಾೃಬ್‌ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸರಕು ತುಂಬಿದ ಟ್ಯಾಂಕರ್‌ಗಳು, ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲ. ಜೂನ್ 1ರ ಬಳಿಕ ಘನ ವಾಹನಗಳು ಸಂಚರಿಸಬಹುದು. ಮೇ 16ರಿಂದ ಮಿನಿ ಬಸ್, ಪ್ಯಾಸೆಂಜರ್ ವಾಹನಗಳು, ದ್ವಿಚಕ್ರ ವಾಹನ, ಆಂಬ್ಯುಲೆನ್ಸ್, ಇತರೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲ ಮುನ್ನ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯವಿದ್ದಲ್ಲಿ, ಸಂಚಾರಕ್ಕೆ ಸಮಸ್ಯೆಯಾಗದಂತೆ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕೆಲವೆಡೆ ದುರಸ್ತಿ ಕಾಮಗಾರಿ ನಡೆಸಬೇಕಿದ್ದು, ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿಂದ ಮಳೆಗಾಲ ಮುಗಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈಗ ಕ್ಯೂರಿಂಗ್ ನಡೆಯುತ್ತಿದ್ದು, ಮೇ 16ರಿಂದ ಘನ ವಾಹನಗಳು, ಸರಕು ಸಾಗಾಟ ವಾಹನ ಹೊರತುಪಡಿಸಿ, ಮಿನಿಬಸ್, ಪ್ಯಾಸೆಂಜರ್ ವೆಹಿಕಲ್, ಲಘುವಾಹನ ಸಂಚರಿಸಬಹುದು.
– ರವಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಹೆದ್ದಾರಿ ಇಲಾಖೆ

ಆಗುಂಬೆ ಘಾಟಿ ದುರಸ್ತಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇ 16ರಿಂದ ಮಿನಿ ಬಸ್ಸು ಸೇರಿದಂತೆ ಇತರೆ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಜೂನ್ 1ರ ನಂತರ ಘನ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
– ಕೆ.ಎ ದಯಾನಂದ್, ಶಿವಮೊಗ್ಗ ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *