Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕೃಷಿ ಸಾಲಮನ್ನಾ ಎರಡಲಗಿನ ಕತ್ತಿ

Monday, 04.06.2018, 3:03 AM       No Comments

ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ‘ಕೃಷಿ ಸಾಲಮನ್ನಾ’ ವಿಚಾರ ನಮ್ಮ ರಾಜ್ಯದಲ್ಲೀಗ ಚರ್ಚೆಯ ಕೇಂದ್ರ ಬಿಂದು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಣಾಳಿಕೆಯಲ್ಲೇ ಇದನ್ನು ಘೋಷಿಸಿದ್ದವು. ಅತಂತ್ರ ಫಲಿತಾಂಶದ ಕಾರಣ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ‘ಕೃಷಿ ಸಾಲಮನ್ನಾ’ ರಾಜಕೀಯ ಜಿದ್ದಿನ ವಿಷಯವಾಗಿ ಮಾರ್ಪಟ್ಟಿದೆ. ಕೃಷಿಕರಿಗೆ ಇದರಿಂದ ಪ್ರಯೋಜನವಿದೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ, ಆರ್ಥಿಕ ಶಿಸ್ತು, ರಾಜ್ಯದ ಅರ್ಥವ್ಯವಸ್ಥೆ ಹಾಗೂ ಸೊಸೈಟಿಗಳ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ಗಮನಹರಿಸಬೇಕಾದ್ದು ಅವಶ್ಯ.

| ಉಮೇಶ್​ಕುಮಾರ್​ ಶಿಮ್ಲಡ್ಕ

ಕೃಷಿ ಸಾಲಮನ್ನಾ’ ಎಂಬುದು ಎರಡಲಗಿನ ಕತ್ತಿ ಇದ್ದ ಹಾಗೆ. ಸಾಲಮನ್ನಾ ಬೇಡ ಎಂದರೆ ‘ರೈತ ವಿರೋಧಿ ಹಣೆಪಟ್ಟಿ’ ಬೀಳೋದು ಗ್ಯಾರಂಟಿ. ರಾಜಕೀಯ ಲಾಭಕ್ಕಾಗಿ ಮತಬ್ಯಾಂಕ್ ಸೃಷ್ಟಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ‘ಕೃಷಿ ಸಾಲ ಮನ್ನಾ’ವನ್ನು ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡಿವೆ. ಹಾಗೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಪ್ರಚಾರದ ವೇಳೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ಕೂಡ ಈಗ ಮುನ್ನೆಲೆಗೆ ಬಂದಿದೆ.

ದೇಶದ ಬಹುಪಾಲು ಜನ ನಂಬಿ ಕೊಂಡಿರುವುದು ಕೃಷಿಯನ್ನೇ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಆದಾಗ್ಯೂ, ಕೈಗಾರಿಕೆ, ಸೇವಾ ವಲಯಗಳಿಗೆ ಸಿಕ್ಕಷ್ಟು ಉತ್ತೇಜನ ಕೃಷಿ ವಲಯಕ್ಕೆ ಸಿಕ್ಕಿಲ್ಲ ಎಂಬುದೂ ಅಷ್ಟೇ ನಿಜ. ಹೀಗಾಗಿ ‘ಕೃಷಿ ಸಾಲ ಮನ್ನಾ’ ಘೋಷಣೆ ಮಾಡಿದಾಗೆಲ್ಲ ರೈತರು ಸಾಲದ ಹೊರೆ ಒಮ್ಮೆ ಇಳಿಯಿತಲ್ಲ ಎಂದು ಖುಷಿ ಪಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳೋಣ. ಹಾಗಂತ ರಾಜಕೀಯ ಉದ್ದೇಶದ ಕೃಷಿಕರಿಗೆ ತಾತ್ಕಾಲಿಕ ರಿಲೀಫ್ ನೀಡುವ ‘ಕೃಷಿ ಸಾಲ ಮನ್ನಾ’ ಬೇಕಾ? ಅದನ್ನು ಎಷ್ಟರ ಮಟ್ಟಿಗೆ ಸ್ವಾಗತಿಸಬಹುದು ಎಂಬುದು ಕೂಡ ವಿವೇಚನೆಯೊಂದಿಗೆ ನಡೆಸಬೇಕಾದ ಚರ್ಚಾರ್ಹ ವಿಷಯವೂ ಹೌದು.

ರೈತರಿಗೆಷ್ಟು ಪ್ರಯೋಜನ

  1. ತಾತ್ಕಾಲಿಕ ರಿಲೀಫ್
  2. ಹೊಸ ಸಾಲ ಮಾಡುವುದಕ್ಕೆ ಅವಕಾಶ
  3. ಈ ಹಿಂದಿನ ಸರ್ಕಾರ -ಠಿ;50,000 ತನಕದ ಸಾಲ ಮನ್ನಾ ಮಾಡಿದಾಗಲೂ ಅದರ ಪ್ರಯೋಜನ ಎಲ್ಲ ರೈತರಿಗೆ ಸಿಕ್ಕಿಲ್ಲ. ಕಾರಣ ಸಾಲದ ಅವಧಿ.
  4. ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಅವಧಿಯಲ್ಲಿ ಕೃಷಿ ಸಾಲ ವಿತರಣೆ ಮಾಡಿದರೆ, ದಕ್ಷಿಣ ಕರ್ನಾಟಕದಲ್ಲಿ ಕೃಷಿ ಸಾಲ ವಿತರಿಸುವ ಅವಧಿಯೇ ಬೇರೆ. ಮಧ್ಯ ಕರ್ನಾಟಕ, ಬಯಲು ಸೀಮೆಗಳಲ್ಲೂ ಇದು ವ್ಯತ್ಯಸ್ತವಾಗಿರುವ ಕಾರಣ ಸಾಲಮನ್ನಾ ಪ್ರಯೋಜನ ಅರ್ಹರಾದ ಎಲ್ಲ ರೈತರಿಗೂ ಸಿಗುತ್ತಿಲ್ಲ.

ಸೊಸೈಟಿಗೆ ಲಾಭವೋ ನಷ್ಟವೋ

ಮನ್ನಾ ಆಗಿರುವಂತಹ ಕೋಟ್ಯಂತರ ರೂಪಾಯಿ ಕೃಷಿ ಸಾಲವನ್ನು ಬಡ್ಡಿ ಸಹಿತ ಸರ್ಕಾರ ತುಂಬಬೇಕು. ಇದು ಸಾಲಮನ್ನಾ ಘೋಷಿಸುವಾಗ ಹೇಳಿದ ನಿಗದಿತ ಅವಧಿಗೆ ಸೀಮಿತವಾದ್ದರಿಂದ ಸರ್ಕಾರ, ಅಲ್ಲಿವರೆಗೆ ಬಾಕಿ ಇದ್ದ ಕೃಷಿ ಸಾಲವನ್ನು ಬಡ್ಡಿ ಸಹಿತ ತುಂಬಿಕೊಡುತ್ತದೆ. ಈ ಹಣ ಸೊಸೈಟಿಗಳಿಗೆ ತಲುಪುವಾಗ ಮೂರ್ನಾಲ್ಕು ತಿಂಗಳುಗಳಾಗಿರುತ್ತದೆ. ಅದೂ ಒಂದೇ ಕಂತಿನಲ್ಲಿ ಹಣ ಪಾವತಿಯಾಗಿರುವುದಿಲ್ಲ. ನಾಲ್ಕೋ ಐದೋ ಕಂತುಗಳಲ್ಲಿ ಪಾವತಿಯಾಗುತ್ತದೆ. ಈ ವಿಚಾರವಾಗಿ ಸಹಕಾರ ಸೊಸೈಟಿಯೊಂದರ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿರ್ದೇಶಕರೊಂದಿಬ್ಬರು ಮುಂದಿಟ್ಟ ಪ್ರಶ್ನೆಗಳಿವು..

#ಸರ್ಕಾರ ಘೋಷಿಸಿದ ನಿಗದಿತ ಅವಧಿಯ ನಂತರದಲ್ಲಿ ಆ ಸಾಲಕ್ಕಾಗುವ ಬಡ್ಡಿಯನ್ನು ಸೊಸೈಟಿಗೆ ತುಂಬುವವರಾರು? ನಾಲ್ಕೈದು ತಿಂಗಳ ಬಡ್ಡಿ ಹಣ ಸೊಸೈಟಿಗೆ ನಷ್ಟವಲ್ಲವೇ?

#ಸಾಲ ಮನ್ನಾದ ಹಣ ಬಾರದೆ ಹೊಸ ಸಾಲವನ್ನು ಕೃಷಿಕರಿಗೆ ಸೊಸೈಟಿ ಕೊಡುವುದಾದರೂ ಎಲ್ಲಿಂದ?

#ಕೃಷಿಕರಿಗೆ ಹೊಸ ಸಾಲ ವಿತರಿಸುವುದಕ್ಕಾಗಿ ಡಿಸಿಸಿ ಬ್ಯಾಂಕುಗಳಿಂದ ಸಾಲ ತರಬೇಕಾಗುತ್ತದೆ. ಅಲ್ಲಿನ ಸಾಲ ಮತ್ತು ಬಡ್ಡಿ ಮರುಪಾವತಿಗೆ ಸೊಸೈಟಿ ಎಲ್ಲಿಂದ ಹಣ ಕ್ರೋಡೀಕರಿಸಬೇಕು?

#ಇನ್ನು ಹೊಸ ಸಾಲ ಕೊಟ್ಟರೂ ಅದನ್ನು ಕೃಷಿಕರು ಮರುಪಾವತಿಸದೇ ಮತ್ತೊಂದು ಸಾಲಮನ್ನಾವನ್ನು ಎದುರು ನೋಡುತ್ತಿರುತ್ತಾರೆ. ಅವರಿಂದ ಸಾಲವನ್ನು ವಸೂಲಿ ಮಾಡುವುದಾದರೂ ಹೇಗೆ?

#ರಾಜ್ಯದ ಬಹುತೇಕ ಸಹಕಾರಿ ಸೊಸೈಟಿಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಎಲ್ಲರಿಗೂ ಇದರ ಅರಿವಿದ್ದರೂ ರಾಜಕೀಯ ಉದ್ದೇಶ ಈಡೇರಿಕೆಗಾಗಿ ಮೌನದ ಮೊರೆ ಹೋಗಿ ‘ಆರ್ಥಿಕ ಶಿಸ್ತು’ ಕಡೆಗಣಿಸಲ್ಪಟ್ಟಿದೆ ಎಂದೆನಿಸುವುದಿಲ್ಲವೇ?

ಬಿಜೆಪಿ ಭರವಸೆ

ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಇರುವ ಒಂದು ಲಕ್ಷ ರೂಪಾಯಿ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು. (ಪ್ರಣಾಳಿಕೆಯ ಪುಟ 8 -ಮೊದಲ ಅಂಶ)

ಜೆಡಿಎಸ್ ಆಶ್ವಾಸನೆ

ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಿ, ಅವರ ಭೂಮಿಗೆ ನೀರಾವರಿ, ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಿಕೊಟ್ಟರೆ ಅವರು ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲ, ಸರ್ಕಾರಕ್ಕೆ ಸಾಲ ನೀಡುವ ಹಂತಕ್ಕೆ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ರಾಜ್ಯದ ರೈತರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ 53,000 ಕೋಟಿ ರೂ. ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಜೆಡಿಎಸ್ ಸರ್ಕಾರ ಮನ್ನಾ ಮಾಡಲಿದೆ. (ಪ್ರಣಾಳಿಕೆ ಪುಟ 6)

ಸೊಸೈಟಿಗಳ ಆರ್ಥಿಕ ಸ್ಥಿತಿಗತಿ

ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್ ್ಸ (ಎನ್​ಎಎಫ್​ಎಸ್​ಸಿಒಬಿ) ವರದಿ ಪ್ರಕಾರ 2016ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ದೇಶದ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕು(ಡಿಸಿಸಿಬಿ)ಗಳ ಅನುತ್ಪಾದಕ ಆಸ್ತಿ (ಎನ್​ಪಿಎ) ಮೌಲ್ಯ -ಠಿ; 22,406 ಕೋಟಿ. ರಾಜ್ಯ ಸಹಕಾರಿ ಬ್ಯಾಂಕುಗಳ ಎನ್​ಪಿಎ ಮೌಲ್ಯ -ಠಿ; 5,147 ಕೋಟಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಇತರೆ ಸೊಸೈಟಿಗಳ ಎನ್​ಪಿಎ ಲೆಕ್ಕಾಚಾರದ ಮಾಹಿತಿ ಒಟ್ಟಾಗಿ ಲಭ್ಯವಿಲ್ಲ. ದೇಶದಲ್ಲಿರುವ 93,367 ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘಗಳ ಪೈಕಿ 62,050 ಸಂಘಗಳಷ್ಟೇ ಆರೋಗ್ಯವಾಗಿವೆ. ಉಳಿದಂತೆ, 37,112 ಸಂಘಗಳು ಒಟ್ಟು -ಠಿ; 7,009 ಕೋಟಿ ನಷ್ಟದಲ್ಲಿವೆ. 44,896 ಸಂಘಗಳು ಲಾಭದಲ್ಲಿದ್ದು, -ಠಿ; 41.5 ಕೋಟಿ ಲಾಭ ತೋರಿಸಿಕೊಂಡಿವೆ.

2017ರಲ್ಲಿ ಕೃಷಿ ಸಾಲ ಮನ್ನಾ

ಕರ್ನಾಟಕ ಸರ್ಕಾರ –  8,165 ಕೋಟಿ ರೂ.

ಮಹಾರಾಷ್ಟ್ರ ಸರ್ಕಾರ – 34,000 ಕೋಟಿ  ರೂ.

ಉತ್ತರ ಪ್ರದೇಶ ಸರ್ಕಾರ –  36,359 ಕೋಟಿ  ರೂ.

ಆಂಧ್ರಪ್ರದೇಶ ಸರ್ಕಾರ – 20,000 ಕೋಟಿ  ರೂ.

ತೆಲಂಗಾಣ ಸರ್ಕಾರ – 15,000 ಕೋಟಿ  ರೂ.

ಪಂಜಾಬ್ ಸರ್ಕಾರ – 10,000 ಕೋಟಿ  ರೂ.

ಪಶ್ಚಿಮ ಬಂಗಾಳ ಸರ್ಕಾರ-  5,988 ಕೋಟಿ ರೂ.

ಕರ್ನಾಟಕದ ಕೃಷಿ ಕ್ಷೇತ್ರ

ರಾಜ್ಯದ ಕೆಲಸಗಾರರ ಸಂಖ್ಯೆ – 2.8 ಕೋಟಿ

ಕೃಷಿ ಕ್ಷೇತ್ರದಲ್ಲಿರುವವರ ಪ್ರಮಾಣ – ಶೇಕಡ 60

ಕೃಷಿ ಕಾರ್ವಿುಕರ ಸಂಖ್ಯೆ – 1.3 ಕೋಟಿ

ಇದರಲ್ಲಿ ಕೃಷಿಕರ ಪ್ರಮಾಣ – 23.61%

ಕೃಷಿ ಕೆಲಸಗಾರರ ಪ್ರಮಾಣ- 25.67%

(ಮಾಹಿತಿ-ಐಎಸ್​ಇಸಿ)

ಆರ್​ಬಿಐ ಎಚ್ಚರಿಕೆ

ಸಾಲಮನ್ನಾ ಕ್ರಮದ ದುಷ್ಪರಿಣಾಮದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಜೂನ್​ನಲ್ಲಿ ಸರ್ಕಾರಗಳನ್ನು ಎಚ್ಚರಿಸಿತ್ತು. ಈ ವಿಷಯವಾಗಿ ರಾಜ್ಯ ಮುಂಗಡಪತ್ರಗಳ ಅಧ್ಯಯನ ನಡೆಸಿದ ಆರ್​ಬಿಐ, ‘ಸ್ಟೇಟ್ ಫಿನಾನ್ಸಸ್: ಎ ಸ್ಟಡಿ ಆಫ್ ಬಜೆಟ್ ಆಫ್ 2016-17’ ಎಂಬ 363 ಪುಟಗಳ ವರದಿಯನ್ನು ಪ್ರಕಟಿಸಿತ್ತು. ಇದರ ಪ್ರಕಾರ ಕರ್ನಾಟಕದಲ್ಲಿ ರೈತರು ಸಹಕಾರಿ ಸಂಘಗಳಿಂದ -ಠಿ; 10,000 ಕೋಟಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ -ಠಿ; 35,000 ಕೋಟಿ ಸಾಲ ಪಡೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯದ 160 ಬರಪೀಡಿತ ತಾಲೂಕುಗಳ ಕೃಷಿಕರ ಸಾಲ ಮನ್ನಾಕ್ಕೆ ಆಗ್ರಹಿಸಿದ್ದರು. ಈ ರೀತಿ ಮಾಡುವುದರಿಂದ ದೇಶದ, ರಾಜ್ಯದ ಜಿಡಿಪಿ ಮತ್ತು ಅರ್ಥ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ ಎಂದು ಆರ್​ಬಿಐ ಎಚ್ಚರಿಸಿತ್ತು.

Leave a Reply

Your email address will not be published. Required fields are marked *

Back To Top