ಗೇಣಿ ಕೃಷಿಕರಿಗೆ ಅತಿವೃಷ್ಟಿ ಪ್ರಹಾರ

ವಿಜಯವಾಣಿ ಸುದ್ದಿಜಾಲ ಶಿರಸಿ

ನಿರಂತರ ಮಳೆಯಿಂದ ಬನವಾಸಿ ಭಾಗದ ಗೇಣಿ ಕೃಷಿಕರ ಗೋಳು ಹೇಳತೀರದಾಗಿದೆ. ಭೂಮಿ ಬಾಡಿಗೆ ಪಡೆದು ಹಾಕಿದ್ದ ಹಣ, ಶ್ರಮ ಸಂಪೂರ್ಣ ಮಣ್ಣುಪಾಲಾಗಿದೆ.

ಬನವಾಸಿ ಹೋಬಳಿಯ ಹಲವೆಡೆ ಭೂ ಮಾಲೀಕರಿಂದ ಒಪ್ಪಂದದ ಮೇರೆಗೆ ಭೂಮಿ ಪಡೆದು ನಡೆಸುವ ಗೇಣಿ ಕೃಷಿ ವ್ಯವಸ್ಥೆಯಿದೆ. ಪ್ರಸಕ್ತ ವರ್ಷ 8 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ, 400 ಹೆ. ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದರಲ್ಲಿ ಅಂದಾಜು 3 ಸಾವಿರ ಹೆ. ಪ್ರದೇಶದ ಭತ್ತ, 160 ಹೆ.ಗೂ ಹೆಚ್ಚು ಮೆಕ್ಕೆಜೋಳ ಕ್ಷೇತ್ರದಲ್ಲಿ ಗೇಣಿ ರೈತರು ಕೃಷಿ ಮಾಡಿದ್ದಾರೆ. ಬನವಾಸಿ, ನರೂರು, ಅಜ್ಜರಣಿ, ಭಾಶಿ, ಮೊಗಳ್ಳಿ, ತಿಗಣಿ, ಕಲಕರಡಿ, ಮಧುರವಳ್ಳಿ, ಅಂಡಗಿ, ದಾಸನಕೊಪ್ಪ, ಬಂಕನಾಳ, ಕೊರ್ಲಕಟ್ಟಾ ಸೇರಿ ಹಲವು ಕಡೆ ನಿರಂತರ ಮಳೆಯಿಂದ ಹೆಚ್ಚಿನ ಹಾನಿ ಅನುಭವಿಸಿದವರು ಈ ಗೇಣಿ ಕೃಷಿಕರು.

ಜೂನ್ ಆರಂಭದ ವೇಳೆಗೆ ಭೂ ಮಾಲೀಕರಿಂದ ಗೇಣಿ ಪಡೆದಿದ್ದ ಕೃಷಿಕರು ಮಳೆಯಿಲ್ಲದೆ ಬಿತ್ತನೆ ಮಾಡಲು ವಿಳಂಬ ಮಾಡಿದ್ದರು. ನಂತರ ಅತಿವೃಷ್ಟಿಯು ಬಿತ್ತನೆಗೆ ಅಡ್ಡಿ ಮಾಡಿತ್ತು. ಎತ್ತರದ ಪ್ರದೇಶಗಳಲ್ಲಿ ಗದ್ದೆಯಿದ್ದವರು ಅಲ್ಪಾವಧಿಯ ಮಳೆಯಾಶ್ರಿತ ಭತ್ತ ಬಿತ್ತನೆ ಮಾಡಿದ್ದರು. ಅವೆಲ್ಲ ಈಗ ಮಳೆ ನೀರಿಗೆ ಸಿಲುಕಿ ಹಾನಿಗೀಡಾಗಿವೆ.

ಮಳೆಯ ಅಬ್ಬರಕ್ಕೆ ಭತ್ತದ ಗದ್ದೆ ನೀರಿನಲ್ಲಿ ಹಾಸಿಹೋಗಿದೆ. ತೆನೆಗಳು ನೆಲಕ್ಕೊರಗಿವೆ. ಕಟಾವಿಗೆ ಬಂದ ಗದ್ದೆಗಳಲ್ಲಿ ನೀರು ನಿಂತು ಫಸಲು ಕೈಗೆ ಸಿಗದಂತಾಗಿದೆ. ಜಾನುವಾರುಗಳಿಗೆ ಆಹಾರಕ್ಕೆ ಆಸರೆಯಾಗಿದ್ದ ಹುಲ್ಲು ಬಳಕೆಗೆ ಬಾರದಂತಾಗಿದೆ. ಭೂ ಮಾಲೀಕರಿಗೆ ಮೌಖಿಕ ಒಪ್ಪಂದ ಮಾಡಿಕೊಂಡು ಕೃಷಿ ಮಾಡಿದ್ದ ರೈತರು ಸಾಲದ ಕೂಪಕ್ಕೆ ಬೀಳುವಂತಾಗಿದೆ.

ಕಟಾವಿಗೆ ಬರುವ ಹೊತ್ತಿಗೆ ಅಕಾಲಿಕ ಮಳೆ ಸುರಿದಿದೆ. ಗದ್ದೆ ತುಂಬ ನೀರು ನಿಂತಿದೆ. ಕಾಳು ಗಟ್ಟಿಯಾಗಿದ್ದ ಭತ್ತ ನೀರಿನಲ್ಲಿ ನೆನೆದರೆ ಮತ್ತೆ ಉಪಯೋಗಕ್ಕೆ ಬರುವುದಿಲ್ಲ. ಹಾಕಿದ ಹಣ, ಶ್ರಮ ಎಲ್ಲವೂ ವ್ಯರ್ಥವಾಗಿದೆ. ಎಕರೆಯೊಂದಕ್ಕೆ 6 ಕ್ವಿಂಟಾಲ್ ಭತ್ತ ನೀಡುವ ಒಪ್ಪಂದದ ಮೇರೆಗೆ ಭೂಮಿ ಗೇಣಿ ಪಡೆದಿದ್ದೆವು. ಈಗ ಎಲ್ಲವೂ ಮಣ್ಣುಪಾಲಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದು, ಮುಂದಿನ ದಾರಿ ಕಾಣದಾಗಿದೆ.

| ದಿನೇಶ ಉಪ್ಪಾರ ಗೇಣಿ ಕೃಷಿಕ

ರೈತರು ಯಾವ ಬೆಳೆ ಬೆಳೆದರೂ ಗೋಳು ತಪ್ಪಿದ್ದಲ್ಲ. ಅತಿವೃಷ್ಟಿ, ಅನಾವೃಷ್ಟಿಯ ನಡುವೆ ಕೃಷಿ ಮಾಡಲು ರೈತರು ಹಿಂದೇಟು ಹಾಕುವಂತಾಗಿದೆ. ಹವಾಮಾನ ವೈಪರೀತ್ಯದಿಂದ ರೈತ ಅತಂತ್ರನಾಗಿದ್ದಾನೆ. ಗೇಣಿ ಕೃಷಿಕ ಮಾತ್ರವಲ್ಲ, ಪ್ರತಿ ರೈತನ ಬದುಕು ಮಣ್ಣುಪಾಲಾಗಿದೆ.

| ಆನಂದ ಗೌಡ ಕೃಷಿಕ

Leave a Reply

Your email address will not be published. Required fields are marked *