ಮಣ್ಣಿನ ಮಗಳ ಚಿನ್ನದ ಸಾಧನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು. ಕೃಷಿ ಉಳಿಬೇಕು, ಬೆಳಿಬೇಕು. ಚಿನ್ನದಂತಹ ಭೂತಾಯಿ ಸೇವೆ ಮಾಡಿ ಹೊಸ ಸಂಶೋಧನೆ, ಆವಿಷ್ಕಾರ ಮಾಡುವುದೇ ನನ್ನ ಗುರಿ!

ತೋಟಗಾರಿಕೆ ವಿಜ್ಞಾನಗಳ ವಿವಿದ್ಯಾಲಯದಲ್ಲಿ ಬುಧವಾರ ನಡೆದ ತೋವಿವಿ 8 ನೇ ಘಟಿಕೋತ್ಸವದಲ್ಲಿ 17 ಚಿನ್ನದ ಪದಕ ಪಡೆದ ಮಲೆನಾಡಿನ ಕುವರಿ ಸೀಮಾ ಗಣಪತಿ ಹೆಗಡೆ ತನ್ನ ಮುಂದಿನ ಗುರಿ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯವಿದು.

ಕಷ್ಟಪಟ್ಟು ಓದಿದ್ದಕ್ಕೆ ಸಿಕ್ಕ ಫಲವಿದು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ನನ್ನ ಊರಿಗೆ ಹೋಗಿ ನಮ್ಮ ಜಮೀನಿನಲ್ಲಿ ಹೊಸ ಸಂಶೋಧನೆ ಮಾಡಿ ಅನ್ನದಾತರು, ಭೂತಾಯಿ ಸೇವೆ ಮಾಡುತ್ತೇನೆ ಎಂದು ಸೀಮಾ ತಿಳಿಸಿದರು.

ಕುಟುಂಬದ ಬೆಂಬಲ: ಸೀಮಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಬ್ಬೆ ಗ್ರಾಮದವರು. ತಂದೆ ಗಣಪತಿ ಸರ್ಕಾರಿ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಕವಿತಾ ಗೃಹಿಣಿ. ಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತಂದೆ,ತಾಯಿಗೆ ಮುದ್ದಿನ ಮಗಳು ಬಂಗಾರದ ಪದಕ ಮುಡಿಗೇರಿಸಿಕೊಳ್ಳುತ್ತಿರುವ ದೃಶ್ಯ ಕಂಡು ಕಣ್ಣಲ್ಲಿ ಆನಂದ ಬಾಷ್ಪ ಹರಿದು ಬಂತು. ಅವಿಭಕ್ತ ಕುಟುಂಬದಲ್ಲಿ ಬೆಳೆದಿರುವ ಸೀಮಾಗೆ 6 ಎಕರೆ ಜಮೀನು ಇದ್ದು, ಅಡಿಕೆ, ಬಾಳೆ ಕೃಷಿ ಮಾಡುತ್ತಿದ್ದಾರೆ.

2012ರಲ್ಲಿ ಎಸ್ಸೆಸ್ಸೆಲ್ಸಿ ಶೇ.97.60, ಪಿಯುಸಿಯಲ್ಲಿ ಶೇ.95.66 ಅಂಕ ಪಡೆದಿದ್ದಾರೆ. ಮೊದಲಿನಿಂದಲೂ ಕೃಷಿ ಬಗ್ಗೆ ಒಲವು ಹೊಂದಿದ್ದ ಸೀಮಾ ಪಿಯುಸಿ ಬಳಿಕ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಬಿಟ್ಟು ತೋಟಗಾರಿಕೆ ಶಿಕ್ಷಣ ಆಯ್ಕೆ ಮಾಡಿಕೊಂಡರು. ಮಗಳ ಆಸೆಗೆ ಅಪ್ಪ, ಅಮ್ಮ, ಕುಟುಂಬದವರು ಬೆಂಬಲ ನೀಡಿದರು. ನಂತರ ಶಿರಸಿಯಲ್ಲಿರುವ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್​ಸಿ ಮುಗಿಸಿದರು.

2017-18ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿ 10 ಕ್ಕೆ 9.23 ಅಂಕ ಪಡೆಯುವ ಮೂಲಕ 17 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯ ಜೈವಿಕ ತಂತ್ರಜ್ಞಾನ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.