ಬೀಳು ಭೂಮಿ ಗುತ್ತಿಗೆ!

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ನೀವು ಕೃಷಿಭೂಮಿಯನ್ನು ಬೀಳು ಬಿಟ್ಟಿದ್ದೀರಾ? ಹಾಗಿದ್ದರೆ ಸರ್ಕಾರವೇ ಅದನ್ನು ಮತ್ತೊಬ್ಬರಿಗೆ ಗುತ್ತಿಗೆ ನೀಡಲಿದೆ! ಕೃಷಿಯನ್ನು ಲಾಭ ದಾಯಕವಾಗಿಸುವ ಉದ್ದೇಶದಿಂದ ಬೀಳು ಭೂಮಿ ಸದ್ಬಳಕೆಗೆ ಹೊಸ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕೃಷಿ ಬೆಲೆ ಆಯೋಗ ನಡೆಸಿರುವ ಅಧ್ಯಯನದ ಪ್ರಕಾರ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ (ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ. 16) ಭೂಮಿ ಬೀಳು ಬಿದ್ದಿದೆ. ಇದರಲ್ಲಿ ಕೃಷಿ ಚಟುವಟಿಕೆ ನಡೆಸಿ, ರೈತರಿಗೆ ಪರ್ಯಾಯ ಮಾರ್ಗಗಳ ಮೂಲಕ ಆದಾಯ ತಂದುಕೊಡುವುದು ಸರ್ಕಾರದ ಉದ್ದೇಶ. ರಾಜ್ಯದಲ್ಲಿರುವ ಬೀಳು ಭೂಮಿ ಕುರಿತು ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

3 ವರ್ಷ ಬೀಳು ಬಿಟ್ಟ ಭೂಮಿಯನ್ನು ತಹಸೀಲ್ದಾರರು ವಶಕ್ಕೆ ಪಡೆದು ಗುತ್ತಿಗೆಗೆ ನೀಡಬಹುದು ಎಂದು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ ಈ ನಿಯಮ ಕಟ್ಟುನಿಟ್ಟಾಗಿ ಜಾರಿ ಬಂದಿಲ್ಲ. ಹೀಗಾಗಿ ಭೂ ಸುಧಾರಣಾ ಕಾಯ್ದೆ, ಕೇಂದ್ರ ಸರ್ಕಾರದ ಭೂ ಗುತ್ತಿಗೆ ಕಾಯ್ದೆ ಅಂಶಗಳನ್ನು ಸೇರಿಸಿ ರಾಜ್ಯ ಸರ್ಕಾರ ಹೊಸ ಕಾಯ್ದೆ ರೂಪಿಸಲಿದೆ. ಡಿಸೆಂಬರ್​ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಹೊಸ ಕಾಯ್ದೆ ಮಂಡನೆಯಾಗಲಿದೆ. ರೈತನಿಗೂ ಇದರ ಲಾಭ ಸಿಗಲಿದೆ.

ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರ ಪ್ರಯತ್ನ ಮಾಡಬೇಕು. ಕಂಪನಿಗಳಿಗೆ ಭೂಮಿ ಗುತ್ತಿಗೆ ನೀಡಿ ರೈತರನ್ನು ಶೋಷಿಸಬಾರದು.

| ಮಾರುತಿ ಮಾನ್ಪಡೆ ಅಧ್ಯಕ್ಷ, ಪ್ರಾಂತ ರೈತ ಸಂಘ

ಬೀಳು ಭೂಮಿ ಬಳಕೆಗೆ ಸಮಗ್ರ ನೀತಿ ಅಗತ್ಯವಿದೆ. ಅಧ್ಯಯನ, ಕಾರ್ಯಾಗಾರ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದೇವೆ.

| ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅಧ್ಯಕ್ಷ, ಕೃಷಿ ಬೆಲೆ ಆಯೋಗ

ಹೊಸ ಕಾಯ್ದೆಯಲ್ಲಿ ಏನಿರಲಿದೆ?

# ಬೀಳು ಭೂಮಿಯನ್ನು ಕ್ಲಸ್ಟರ್ ಮಾದರಿಯಲ್ಲಿ ಗುತ್ತಿಗೆ ನೀಡುವುದು

# ಕೆಲ ಕಂಪನಿಗಳಿಗೂ ಗುತ್ತಿಗೆ ನೀಡಲು ಅವಕಾಶ , ಭೂಮಿ ಫಲವತ್ತತೆಗೆ ಯೋಜನೆ ರೂಪಿಸುವುದು

# ಭೂ ಸುಧಾರಣೆ ಕಾಯ್ದೆಯಂತೆ, ತಹಸೀಲ್ದಾರರು ಬೀಳು ಭೂಮಿಯನ್ನು ವಶಕ್ಕೆ ಪಡೆದು ಗುತ್ತಿಗೆ ನೀಡಬಹುದು

# ಗುಂಪು ಕೃಷಿ, ಅರಣ್ಯ ಬೆಳೆಸುವ ಮೂಲಕ ರೈತರಿಗೆ ಆರ್ಥಿಕ ಸಹಾಯ, ಕುರಿ ಮೇಕೆ ಸಾಕಣೆ, ಹುಲ್ಲುಗಾವಲು ಅಭಿವೃದ್ಧಿ, ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಮತ್ತಿತರ ಯೋಜನೆಗಳಿಗೆ ಬಳಕೆ

ಭೂಮಿ ಬೀಳು ಬಿಟ್ಟಿರುವ ರೈತರ ಪ್ರಮಾಣ

# ಸಣ್ಣ ಹಾಗೂ ಅತಿ ಸಣ್ಣ ರೈತರು ಶೇ. 61

# ಮಧ್ಯಮ ವರ್ಗದ ರೈತರು ಶೇ. 20

# ದೊಡ್ಡ ರೈತರು ಶೇ. 19

8000 ಕೋಟಿ ರೂ.

ಬೀಳು ಭೂಮಿಯಿಂದಾಗಿ ವಾರ್ಷಿಕ ಅಂದಾಜು ನಷ್ಟ.

ಉತ್ತರ ಪ್ರದೇಶದಲ್ಲಿದೆ ದಂಡ

ಯಾವುದೇ ಭೂಮಿಯನ್ನು ಮೂರು ವರ್ಷ ಬೀಳುಬಿಟ್ಟರೆ ದಂಡ ಹಾಕುವ ಕಾನೂನು ಉತ್ತರ ಪ್ರದೇಶದಲ್ಲಿದೆ. ರಾಜ್ಯದಲ್ಲೂ ಇದನ್ನು ಜಾರಿಗೆ ತರಬೇಕು ಎಂಬ ಒತ್ತಡ ಇದೆ. ಆದರೆ ಇದಕ್ಕೆ ಸರ್ಕಾರ ಸಮ್ಮತಿಸಿಲ್ಲ. ದಂಡ ಹಾಕಿದರೆ ರೈತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದು ಸರ್ಕಾರದ ಹೆದರಿಕೆ.

ಗೇಣಿಗೆ ರೈತರ ಹಿಂಜರಿಕೆ

ಬೀಳು ಭೂಮಿಯನ್ನು ಗೇಣಿ ಕೊಡಬಹುದು ಎಂಬ ಅಭಿಪ್ರಾಯವೂ ಇದೆ. ಇದರಿಂದ ಭೂಮಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ರೈತರಲ್ಲಿದೆ. ಹೀಗಾಗಿ ರೈತರು ಗೇಣಿಗೆ ಒಪು್ಪವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳುತ್ತವೆ.

ಬೀಳಿಗೆ ಕಾರಣಗಳು

# ಮಳೆ/ನೀರಿನ ಕೊರತೆ
#ಭೂ ಸವಕಳಿ
#ಕಾರ್ವಿುಕರ ಅಲಭ್ಯತೆ
#ನಿರ್ವಹಣೆ ಕೊರತೆ/ ಸಾಲ
#ನ್ಯಾಯಾಲಯದಲ್ಲಿ ವ್ಯಾಜ್ಯ
#ಕೃಷಿ ಲಾಭದಾಯಕವಲ್ಲ ಎಂಬ ಅಭಿಪ್ರಾಯ
#ಕಾಡುಪ್ರಾಣಿಗಳ ಹಾವಳಿ
#ಭೂಮಿ ಮೌಲ್ಯ ಅಧಿಕವಾಗುತ್ತಿರುವುದು

ಭೂಮಿ ಬಳಕೆಗೆ ಸಂಬಂಧಿಸಿದಂತೆ ಮುಂದಿನ ಅಧಿವೇಶನದಲ್ಲಿ ಕಾನೂನು ತರಲು ಉದ್ದೇಶಿಸಲಾಗಿದೆ. ಅದರ ಜತೆಗೆ ಭೂಮಿ ಫಲವತ್ತತೆ ಕಾಪಾಡಲು ಯೋಜನೆ ರೂಪಿಸುವ ಬಗ್ಗೆಯೂ ಸರ್ಕಾರ ಚಿಂತಿಸಿದೆ.

| ಎನ್.ಎಚ್. ಶಿವಶಂಕರರೆಡ್ಡಿ ಕೃಷಿ ಸಚಿವ