ಬಿಸಿಲ ತಾಪ ಬಾಡಿದ ಹಿಂಗಾರ

ಶ್ರವಣ್‌ಕುಮಾರ್ ನಾಳ, ಪುತ್ತೂರು

ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಅಡಕೆ ಹಿಂಗಾರ ಹೂ ಬಾಡುತ್ತಿದೆ. ಜನವರಿ ಆರಂಭದಲ್ಲಿ ಬಹುತೇಕ ಅಡಕೆ ಗಿಡಗಳು ಹಿಂಗಾರ ಬಿಟ್ಟಿದ್ದು, ಬಿಸಿಲ ತಾಪದ ಪರಿಣಾಮ ಕರಾವಳಿಯ ನೂರಾರು ಎಕರೆ ಪ್ರದೇಶದಲ್ಲಿ ಅಡಕೆ ಹಿಂಗಾರ ಬಾಡಿ ಕಾಯಿ ಉದುರುತ್ತಿದೆ.

ಏಪ್ರಿಲ್, ಮೇ ಹಿಂಗಾರ ಒಡೆದು ಹೂ ಹೊರಬರುವ ಸಮಯ. ಕರಾವಳಿಯಲ್ಲಿ ಮಧ್ಯಾಹ್ನದ ವೇಳೆ 34ರಿಂದ 37ಡಿ.ಸೆ. ತಾಪಮಾನ ಇರುವ ಕಾರಣ, ಹಿಂಗಾರ ಒಡೆಯದೆ ಒಳಗಡೆಯೇ ಬಾಡುತ್ತಿದೆ. ಬೇಸಗೆ ಕಾಲದಲ್ಲಿ ಅಡಕೆ ಗಿಡದ ಬುಡಕ್ಕೆ ನೀರು ಅಗತ್ಯ. ಹಿಂಗಾರಕ್ಕೆ ನೀರು ಬಿದ್ದರೆ ಅಡಕೆ ಹೂವಿನ ಪರಾಗಸ್ಪರ್ಶಕ್ಕೆ ಹಿನ್ನೆಯಾಗುತ್ತದೆ. ಆದರೆ, ಹಿಂಗಾರ ಒಡೆದು ಹೂ ಹೊರಬರುವ ಸಮಯ ಹತ್ತಿರವಿರುವಾಗಲೇ ಹಿಂಗಾರ ಬಾಡುತ್ತಿರುವುದು ರೈತರಿಗೆ ಆತಂಕ ತಂದಿದೆ.

ಸತತ ನೀರು ಪೂರೈಕೆ ಮುಖ್ಯ: ಹಿಂಗಾರ ಬೆಳೆಯುವ ಸಂದರ್ಭ ಸಾಧಾರಣ ಬಿಸಿಲು ಹಾಗೂ ಗಿಡಕ್ಕೆ ಸಾಕಷ್ಟು ನೀರಿನ ಪೂರೈಕೆ ಆಗಬೇಕು. ಕರಾವಳಿಯ ಹಲವೆಡೆ ಕೆಲ ದಿನಗಳಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ಬಹುತೇಕ ಅಡಕೆ ತೋಟಗಳಿಗೆ ನೀರಿನ ಕೊರತೆಯಾಗಿ, ಪಿಂಗಾರ ಬಾಡಿದೆ. 3 ದಿನ ಹಿಂದೆ ಸುಬ್ರಹ್ಮಣ್ಯ ಭಾಗದಲ್ಲಿ ಮಳೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಮಳೆಯಾದರೆ ಅಡಕೆ ಬೆಳೆಗೆ ಹಾನಿ. ಹಿಂಗಾರ ಬಾಡದಂತೆ ಕಾಪಾಡಲು ಅಡಕೆ ತೋಟಗಳಿಗೆ ಕೃಷಿಕರು ಯಥೇಚ್ಚ ನೀರುಣಿಸುತ್ತಿದ್ದಾರೆ.

ಹಿಂಗಾರಕ್ಕೆ 26-29ಡಿ.ಸೆ. ತಾಪಮಾನ ಯೋಗ್ಯ: ಅಡಕೆ ಹೂ ಬಿಡುವ ವೇಳೆ ತಾಪಮಾನ 30-33 ಡಿ.ಸೆ. ಇರಬೇಕು. ಕರಾವಳಿಯಲ್ಲಿ ಸದ್ಯ 34-36ಡಿ.ಸೆ.ತಾಪಮಾನ ಇದೆ. ನಿರಾವರಿಯೂ ಕೃಷಿಗೆ ಅನುಕೂಲವಾಗಿಲ್ಲ. ಒಂದು ಅಡಕೆ ಸಸಿ ಉತ್ತಮ ಇಳುವರಿ ಪಡೆಯಲು ಕನಿಷ್ಠ ಒಂದು ಗಿಡಕ್ಕೆ 30 ರಿಂದ 40 ಲೀ.ನೀರು ಅಗತ್ಯ. ನಿಗದಿತ ತಾಪಮಾನ ಮತ್ತು ನೀರು ಸಿಗದಿದ್ದರೆ ಹಿಂಗಾರ ಉದುರುವ ಸಾಧ್ಯತೆ ಹೆಚ್ಚು. ಒಂದು ಹಿಂಗಾರ ತನ್ನೊಳಗೆ 26-29ಡಿ.ಸೆ. ಉಷ್ಣಾಂಶ ಹಿಡಿದಿಟ್ಟುಕೊಳ್ಳುತ್ತದೆ. ಇದು ಹಿಂಗಾರದೊಳಗಿನ ಕಾಯಿ ಬೆಳೆಯಲು ಯೋಗ್ಯ ವಾತಾವರಣ. ಆದರೆ ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಹೆಚ್ಚಾದಂತೆ ಹಿಂಗಾರದೊಳಗಿನ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಹಿಂಗಾರದೊಳಗಿನ ಕಾಯಿ ಬಾಡುತ್ತದೆ.

ವಾತಾವರಣದಲ್ಲಿ ಬಿಸಿಲ ಪ್ರಮಾಣ ಹೆಚ್ಚಾದಂತೆ ಅಡಕೆ ಹಿಂಗಾರ ಬಾಡುತ್ತದೆ. ಒಂದು ವೇಳೆ ಅಡಕೆ ಹಿಂಗಾರ ಒಡೆದರೂ ಬಿಸಿಲಿನ ಧಗೆಗೆ ಹೂವು ಉದುರುವ ಸಾಧ್ಯತೆ ಹೆಚ್ಚು. ಪ್ರತಿದಿನ ಅಡಕೆ ಗಿಡಗಳಿಗೆ 30-40 ಲೀ.ನೀರು ನೀಡುವ ಮೂಲಕ ಸದ್ಯಕ್ಕೆ ಸಮಸ್ಯೆಯಿಂದ ಪರಾಗಬಹುದು.
|ಕುಮಾರ್ ಪೆರ್ನಾಜೆ, ಕೃಷಿ ತಜ್ಞ

ಬೇಸಿಗೆ ಕಾಲದಲ್ಲಿ ಅಡಕೆ ಹಿಂಗಾರ ಒಡೆಯುವುದು ಸಹಜ ಪ್ರಕ್ರಿಯೆ. ಆಂತರಿಕ ಉಷ್ಣಾಂಶ ಹೆಚ್ಚಾದಾಗ ಹೀಗಾಗುತ್ತದೆ. ಬಾಹ್ಯವಾಗಿ ಅದನ್ನು ತಡೆಯಲು ಸಾಧ್ಯವಿಲ್ಲ.
|ನಿಖಿತಾ, ಸಂಶೋಧಕಿ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬೆಂಗಳೂರು

Leave a Reply

Your email address will not be published. Required fields are marked *