ಕೃಷಿ, ಆಹಾರ ಸಂಸ್ಕರಣೆ ತರಬೇತಿ ಸದುಪಯೋಗವಾಗಲಿ

ಚಾಮರಾಜನಗರ: ಕೃಷಿ ಹಾಗೂ ಆಹಾರ ಸಂಸ್ಕರಣೆ ಕುರಿತು ನೀಡುವ ತರಬೇತಿಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ರೆಡಿಟ್ ಐ ಸಂಸ್ಥೆ ವ್ಯವಸ್ಥಾಪಕ ಡಾ.ಎಂ.ಪಿ.ವರ್ಷ ತಿಳಿಸಿದರು.

ನಗರದ ಐಸೆಟ್ ಕೌಶಲ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಿರು ಕೌಶಲ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ರೈತರು ಬೆಳೆಯುವ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ನಾಶವಾಗುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ದೇಶದಲ್ಲಿರುವ 137 ಕೋಟಿ ಜನಸಂಖ್ಯೆಗೆ ಆಹಾರ ಬಹಳ ಮುಖ್ಯವಾಗಿದೆ. ಪ್ರಸ್ತುತ ಜನರು ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ ಎಂದು ತಿಳಿಸಿದರು.

ರೈತರು ಬೆಳೆದ ಆಹಾರ ಪದಾರ್ಥಗಳನ್ನು ಸಂಸ್ಕರಿಸುವ ಕುರಿತು ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ. ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ಹೊರದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಪ್ರತಿಯೊಬ್ಬರಿಗೂ ಕೌಶಲ ತರಬೇತಿ ಅವಶ್ಯಕ ಇದ್ದು, ನಮ್ಮ ಇಲಾಖೆಯಿಂದಲೂ ಇಂತಹ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ. ಅರ್ಹರು ಇಲಾಖೆಯಿಂದ ದೊರೆಯುವ ಕೌಶಲ ತರಬೇತಿಗಳನ್ನು ಪಡೆದು ಉದ್ಯಮಶೀಲರಾಗಿ ಎಂದು ಸಲಹೆ ನೀಡಿದರು.

ಐಸೆಟ್ ಕೌಶಲ ತರಬೇತಿ ಕೇಂದ್ರದ ಅರುಣ್‌ಕುಮಾರ್ ಮಾತನಾಡಿ, ಮಹಿಳೆಯರು ಪ್ರೋತ್ಸಾಹಧನದ ಆಸೆಯಿಂದ ತರಬೇತಿಗಳಿಗೆ ಬಂದು ಪ್ರಮಾಣಪತ್ರಗಳನ್ನು ಪಡೆದು ಮನೆಯಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ತರಬೇತಿ ಪಡೆದ ನಂತರ ಜೀವನ ರೂಪಿಸಿಕೊಂಡರೆ ತರಬೇತಿಗೂ ಗೌರವ ಸಿಗುತ್ತದೆ ಎಂದರು.

ಐಸೆಟ್ ಕೌಶಲ ತರಬೇತಿ ಕೇಂದ್ರದ ನಾಗರತ್ನ, ಸವಿತಾ ಇತರರಿದ್ದರು.

Leave a Reply

Your email address will not be published. Required fields are marked *