ಅಂದು ವೈದ್ಯ ಇಂದು ಮಾದರಿ ಕೃಷಿಕ

ವೈದ್ಯ ವೃತ್ತಿಯಲ್ಲಿ ಸಾಕಷ್ಟು ಉನ್ನತ ಸ್ಥಾನಕ್ಕೇರಿ, ನಿವೃತ್ತಿ ಬಳಿಕ ಸಂಪೂರ್ಣವಾಗಿ ಕೃಷಿಕರಾಗಿ ಬದಲಾದವರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಯಕನೂರಿನ ಡಾ. ಅಂದಾನಪ್ಪ ಕುಲಕರ್ಣಿ.

| ಕರಿಯಪ್ಪ ಅರಳಿಕಟ್ಟಿ

ಇವರದು ಕತ್ತರಿ ಹಿಡಿದು ಸಾವಿರಾರು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ ಕೈ. ಮೊಣಕಾಲು ಚಿಪ್ಪು, ಬೆನ್ನು ಹುರಿ, ಕೈ-ಕಾಲುಗಳ ಎಲುಬು ಜೋಡಿಸಿ ರೋಗಿಗಳು ಸಹಜವಾಗಿ ಓಡಾಡುವ ಸ್ಥಿತಿಗೆ ತಂದಿರುವ ಕೈ!

ಈಗ ಇದೇ ಕೈಗಳು ಟ್ರ್ಯಾಕ್ಟರ್ ಓಡಿಸಿಕೊಂಡು ಹೋಗಿ ಜಮೀನಿನ ಕೆಸರಿನಲ್ಲಿ ಕೆಲಸ ಮಾಡಿ ಭೂಮಿಯನ್ನು ಹಸಿರಾಗಿಸುವ ಕಾರ್ಯದಲ್ಲಿ ನಿರತವಾಗಿವೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಯಕನೂರ ಗ್ರಾಮದ ಡಾ. ಅಂದಾನಪ್ಪ ಕುಲಕರ್ಣಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಕತ್ತರಿ ಹಿಡಿದು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸಾವಿರಾರು ರೋಗಿಗಳ ಮೂಳೆಗಳಿಗೆ ಚೈತನ್ಯ ನೀಡಿದವರು. ಈಗ ತಮ್ಮದೇ ಜಮೀನಿನಲ್ಲಿ ಬೆವರು ಸುರಿಸಿ ಹತ್ತಾರು ಬೆಳೆ ಬೆಳೆಯುವ ಮೂಲಕ ಮಾದರಿ ರೈತರಾಗಿದ್ದಾರೆ. ಅಂದ ಹಾಗೆ, ಇವರ ವಯಸ್ಸು 80 ವರ್ಷ.

ಕೃಷಿಯೇ ಪ್ರಧಾನ: ಬೃಹತ್ ಪ್ರಮಾಣದ ಜಮೀನಿದ್ದರೂ ಕೃಷಿಯಲ್ಲಿ ಕೈ ಸುಟ್ಟುಕೊಂಡವರು ಸಾಕಷ್ಟಿದ್ದಾರೆ. ಆದರೆ ಅಂದಾನಪ್ಪ ಕೃಷಿ ಬಗೆಗೆ ಸಾಕಷ್ಟು ಅಭ್ಯಸಿಸಿದ್ದು, ತಮ್ಮ 140 ಎಕರೆ ಜಮೀನನ್ನು ಸಂಪೂರ್ಣ ಉಳುಮೆ ಮಾಡಿ, ಉತ್ತಮ ಇಳುವರಿ ತೆಗೆಯುತ್ತಿದ್ದಾರೆ. ಕಳೆದ 20 ವರ್ಷದಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ಸಮಗ್ರ ಕೃಷಿಗಾಗಿ ಇಡೀ ದಿನ ಮೀಸಲಿಟ್ಟಿದ್ದಾರೆ. ತಾವೇ ಟ್ರ್ಯಾಕ್ಟರ್ ಓಡಿಸಿಕೊಂಡು ಜಮೀನಿಗೆ ತೆರಳಿ, ಉಳುಮೆ ಮಾಡುತ್ತಾರೆ. ಬೆಳೆಗಳಿಗೆ ಗೊಬ್ಬರ, ಔಷಧ ಸಿಂಪಡಣೆ ಮಾಡುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಒಬ್ಬರೇ ನಿರ್ವಹಿಸುತ್ತಾರೆ. ಮುಂದೆ, ಔಷಧ ಸಸಿಗಳನ್ನು ಬೆಳೆಯುವ ಇರಾದೆ ಇವರಲ್ಲಿದೆ. ‘ಕೃಷಿ ಉತ್ತಮ ಆರೋಗ್ಯಯುತ ಜೀವನ ನೀಡುವ ಜತೆಗೆ ಆರ್ಥಿಕವಾಗಿ ಸದೃಢಗೊಳಿಸುತ್ತದೆ. ಪ್ರೀತಿ, ವಿಶ್ವಾಸ, ಗೌರವ, ಮಿಗಿಲಾಗಿ ಆರೋಗ್ಯಕರ ಪರಿಸರ ಇರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ದೇಶ, ವಿದೇಶ ತಿರುಗಿದರೂ ಗ್ರಾಮೀಣ ಪರಿಸರವೇ ನನಗೆ ಇಷ್ಟ. ಆದ್ದರಿಂದ ಕೃಷಿ ಕ್ಷೇತ್ರ ಆಯ್ದುಕೊಂಡಿದ್ದೇನೆ’ ಎನ್ನುತ್ತಾರೆ ಡಾ. ಅಂದಾನಪ್ಪ.

ಓದಿದ್ದು ಎಂಎಸ್…

ಮಣಿಪಾಲ ಮೆಡಿಕಲ್ ಕಾಲೇಜ್​ನಲ್ಲಿ ಎಂಬಿಬಿಎಸ್ ಹಾಗೂ ಹುಬ್ಬಳ್ಳಿ ಕಿಮ್ಸ್​ನಲ್ಲಿ ಎಂಎಸ್ ಜನರಲ್ ಸರ್ಜರಿ, ಎಂ ಆಂಡ್ ಬಿ ಅಥೋ ಪದವಿಯನ್ನು ಇವರು ಪಡೆದಿದ್ದಾರೆ. 1969ರಿಂದ ವೃತ್ತಿ ಆರಂಭಿಸಿ 2 ವರ್ಷ ಕಿಮ್ಸ್​ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, 1973ರಿಂದ 78ರವರೆಗೆ ಇಂಗ್ಲೆಂಡ್​ನ ವೆಸಲ್ ಆಸ್ಪತ್ರೆಯಲ್ಲಿ ರಿಜಿಸ್ಟ್ರಾರ್ ಆಗಿ, 1979ರಲ್ಲಿ ಮತ್ತೆ ಕಿಮ್ಸ್​ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ಬಳ್ಳಾರಿಯ ಬಿಮ್ಸ್​ ಆಸ್ಪತ್ರೆಗೆ ಮೇಲ್ವಿಚಾರಕ ಹಾಗೂ ಉಪನ್ಯಾಸಕರಾಗಿ ನೇಮಕಗೊಂಡರು. 1985ರಲ್ಲಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯ ಅಪಘಾತ ವಿಭಾಗದ ನಿರ್ದೇಶಕರಾಗಿದ್ದರು. 1994ರಲ್ಲಿ ಬೆಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನೇಮಕಗೊಂಡು, 96ರಲ್ಲಿ ನಿವೃತ್ತರಾದರು. ಬಳಿಕ ಭಾರತೀಯ ವೈದ್ಯಕೀಯ ಸಂಸ್ಥೆಯ ಸದಸ್ಯರಾಗಿ ಹಾಗೂ 1 ವರ್ಷ ಕೇರಳದಲ್ಲಿ ತಮ್ಮ ಸ್ನೇಹಿತನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರು. ಹೀಗೆ ಸತತ 30 ವರ್ಷ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಹಿರಿಮೆ ಅಂದಾನಪ್ಪರದ್ದು.

ಕಡಿಮೆ ಖರ್ಚಿನ ಬೆಳೆಗೆ ಆದ್ಯತೆ

‘ಕಡಿಮೆ ಖರ್ಚು, ನೀರಿನ ಪ್ರಮಾಣ ಹಾಗೂ ಕೃಷಿ ಕಾರ್ವಿುಕರ ಕೆಲಸ ಕಡಿಮೆ ಬರುವಂತಹ ಬೆಳೆಗಳನ್ನು ಬೆಳೆದರೆ, ರೈತ ಆರ್ಥಿಕವಾಗಿ ಸಬಲನಾಗಲು ಸಾಧ್ಯ. ಆದ್ದರಿಂದ ಮುಂಗಾರಿನಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ, ಹೆಸರು ಮತ್ತು ಹಿಂಗಾರಿನಲ್ಲಿ ಜೋಳ, ಗೋಧಿ, ಕುಸುಬಿ, ಕಡಲೆ ಬೆಳೆಯುತ್ತೇವೆ. ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಎಕರೆಗೆ ಸರಾಸರಿ 35 ಕ್ವಿಂಟಾಲ್ ಇಳುವರಿ ತೆಗೆಯುತ್ತೇವೆ. ಬೆಳೆಗಳಿಗೆ ಸಮರ್ಪಕ ನೀರು ಒದಗಿಸುವ ದೃಷ್ಟಿಯಿಂದ ಸರ್ಕಾರದ ಯೋಜನೆಯಡಿ 2 ಹಾಗೂ ಸ್ವಂತ ಖರ್ಚಿನಲ್ಲಿ 1 ಕೃಷಿ ಹೊಂಡ ನಿರ್ವಿುಸಿಕೊಂಡಿದ್ದೇವೆ. ಮಳೆ ಕೈಕೊಟ್ಟಾಗ ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬೆಳೆಗಳಿಗೆ ಹಾಯಿಸುತ್ತೇವೆ’ ಎಂದು ಅಂದಾನಪ್ಪ ಮಾಹಿತಿ ನೀಡುತ್ತರೆ.

ಮಾರ್ಗದರ್ಶನ

ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಏರ್ಪಡಿಸುವ ಕೃಷಿ ಮೇಳದಲ್ಲಿ ಪಾಲ್ಗೊಂಡು, ಹೊಸ ಹೊಸ ಬೆಳೆಗಳ ಕುರಿತು ಅಧ್ಯಯನ ಮಾಡುವ ಉತ್ಸಾಹ ಇವರದ್ದು. ತಮ್ಮಲ್ಲಿ ಬರುವ ರೈತರಿಗೆ ಬಿತ್ತನೆ, ಗೊಬ್ಬರ, ಔಷಧ ಸಿಂಪಡಣೆ ಕುರಿತು ಮಾಹಿತಿ, ಮಾರ್ಗದರ್ಶನ ನೀಡುತ್ತಾರೆ. ದಶಕಗಳ ಹಿಂದೆ ನವಲಗುಂದ ತಾಲೂಕಿನಲ್ಲಿ ಮೆಕ್ಕೆಜೋಳದ ಕುರಿತು ಬಹುತೇಕ ರೈತರಿಗೆ ಮಾಹಿತಿ ಇರಲಿಲ್ಲ. ಈ ಕುರಿತು, ತಮ್ಮ ಗ್ರಾಮ ಸೇರಿದಂತೆ ತಾಲೂಕಿನಾದ್ಯಂತ ಬಹಳಷ್ಟು ರೈತರಿಗೆ ಮೆಕ್ಕೆಜೋಳದ ಕುರಿತು ಮಾಹಿತಿ ನೀಡಿ, ಬೆಳೆಯಲು ಮಾರ್ಗದರ್ಶನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಗ್ರಾಮೀಣ ಭಾಗದಲ್ಲಿ ದಿನಕ್ಕೆ 13 ಗಂಟೆ ವಿದ್ಯುತ್ ಸಮಸ್ಯೆಯಿದೆ. ಇದರಿಂದ ರಾತ್ರಿ ಸಮಯದಲ್ಲಿ ವಿದ್ಯಾರ್ಥಿಗಳ ಓದು, ಕಂಪ್ಯೂಟರ್ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಗ್ರಾಮದಲ್ಲಿ ದಿನದ 24 ಗಂಟೆಯೂ ವಿದ್ಯುತ್ ಲಭ್ಯವಿರುವ ಸ್ಟಡಿ ರೂಮ್​ನ್ನು ಸ್ವಂತ ಖರ್ಚಿನಲ್ಲಿ ನಿರ್ವಿುಸುವ ವಿಚಾರ ಮಾಡಿದ್ದೇನೆ ಎನ್ನುತ್ತಾರೆ ಅಂದಾನಪ್ಪ. ಇವರ ಪುತ್ರ ನಂದೀಶ್ ಮೆಕಾನಿಕಲ್ ಇಂಜಿನಿಯರಿಂಗ್ ಓದಿಕೊಂಡು 10 ವರ್ಷ ದುಬೈನಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಂದೆ ಕೃಷಿಯಲ್ಲಿ ತೊಡಗಿಕೊಂಡ ಪ್ರೇರಣೆಯಿಂದ ತಾವು ಕೂಡ ವೃತ್ತಿ ಬಿಟ್ಟು ತಂದೆಯ ಕೃಷಿ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.

ಅಂದಾನಪ್ಪ ಅವರ ಸಂಪರ್ಕಕ್ಕೆ: 9900267162

ಕೃಷಿಗೆ ಸಮರ್ಪಕ ಸಮಯ ನೀಡಿ, ವೈಜ್ಞಾನಿಕವಾಗಿ ಮಾಡಿದರೆ ರೈತರು ಕೈ ಸುಟ್ಟುಕೊಳ್ಳುವ ಸಂದರ್ಭ ಬರುವುದಿಲ್ಲ. ಕಡಿಮೆ ಖರ್ಚು ಮಾಡಿ, ಹೆಚ್ಚು ಲಾಭವಾಗುವಂತೆ ಕೃಷಿ ಮಾಡಬೇಕು. ಅಂದಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಸರ್ಕಾರದಿಂದ ಕೂಡ ವೈಜ್ಞಾನಿಕ ಬೆಲೆ ದೊರಕಬೇಕು.

| ಡಾ. ಅಂದಾನಪ್ಪ ಕುಲಕರ್ಣಿ