ಬೈಂದೂರು: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬಹುತೇಕ ಕಡೆ ಕೃಷಿ ಭೂಮಿ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡಿವೆೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ.
ಶಿರೂರು ಗ್ರಾಮದ ಗುಮ್ಮನಾಡಿ ಎಂಬಲ್ಲಿ ಆರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿ ಚರಂಡಿ ಅವ್ಯವಸ್ಥೆಯಿಂದಾಗಿ ನೀರು ಹರಿಯಲು ತೊಡಕಾಗಿ ಮನೆಗಳ ಅಂಗಳಕ್ಕೆ ನುಗ್ಗಿದೆ. ಕೊಲ್ಲೂರು ಮಾರ್ಗದ ತಗ್ಗರ್ಸೆಯ ಹೆದ್ದಾರಿಯಲ್ಲಿ ನೀರು ತುಂಬಿ ರಸ್ತೆ ನದಿಯಂತಾಗಿದೆ.
ಶಿರೂರು ಗ್ರಾಮದ ನಿರೋಡಿ ಬಳಿ ಹೊಲ, ಗದ್ದೆಗಳಿಗೆ ನೀರು ತುಂಬಿದ್ದು ಮನೆಗಳಿಗೆ ನೀರು ನುಗ್ಗುವ ಆತಂಕವಿದೆ. ಯಡ್ತರೆ ಗ್ರಾಮದ ಊದೂರು, ಕಡೈ ಆಲಂದೂರು ಮುಂತಾದ ಕಡೆ ತೋಟ, ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಸಂಜೆಯಾಗುತ್ತಿದ್ದಂತೆ ಮಳೆಯ ಅಬ್ಬರ ಹೆಚ್ಚಿದ್ದು ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಬೈಂದೂರು ತಹಸೀಲ್ದಾರ್ ಭೀಮಸೇನ್ ಕುಲಕರ್ಣಿ ಹಾಗೂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.