ಕೃಷಿ ಮೇಳಕ್ಕೆ ವಸ್ತುಪ್ರದರ್ಶನದ ಮೆರುಗು

ಬ್ರಹ್ಮಾವರ: ಅಡಕೆ ಸುಲಿಯುವ, ಕಳೆ ತೆಗೆಯುವ ಯಂತ್ರ, ಸುಧಾರಿತ ಕೃಷಿ ಉಪಕರಣಗಳು, ದೇಸೀ ಜಾನುವಾರು ತಳಿ, ಮಣ್ಣಿನ ಪಾತ್ರೆಗಳ ವಸ್ತುಗಳ ಪ್ರದರ್ಶನ, ಬ್ರಹ್ಮಾವರ ಪರಿಸರದಲ್ಲಿ ಕೃಷಿ ಬದುಕನ್ನೇ ತೆರೆದಿಟ್ಟಿತು. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಕೃಷಿ ಮೇಳ ಅಂಗವಾಗಿ ಶನಿವಾರ ತೆರೆಯಲಾದ ಕೃಷಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕೇಂದ್ರಗಳು ಕೃಷಿ ಆಸಕ್ತರಿಗೆ ಹೊಸ ಲೋಕವನ್ನೇ ಸೃಷ್ಟಿಸಿತು. ಕೃಷಿಯಲ್ಲಿ ಬಳಸಬಹುದಾದ ನವೀನ ಮಾದರಿ ಯಂತ್ರೋಪಕರಣಗಳು, ಕಳೆ ತೆಗೆಯಲು ಬಳಸುವ ಅತೀ ಚಿಕ್ಕ ಯಂತ್ರ, ಅಡಕೆ ಸುಲಿಯುವ ಯಂತ್ರ, ಹುಲ್ಲು ಕಟಾವು ಮಾಡಬಲ್ಲ ಯಂತ್ರಗಳು, ಅಡಕೆ ಮರಕ್ಕೆ ಔಷಧ ಸ್ಪ್ರೇ ಮಾಡುವ ಯಂತ್ರಗಳು ಕೃಷಿಕರ ಆಸಕ್ತಿಯ ಕೇಂದ್ರಬಿಂದುಗಳಾಗಿದ್ದವು. ಒಣಗಿದ ಅಡಕೆಯನ್ನು ಅಕ್ಕಿ ಗಿರಣಿಯಂತೆ ಯಂತ್ರಕ್ಕೆ ಸುರಿದರೆ ಅದು ಒಂದೊಂದೇ ಅಡಕೆ ಸಿಪ್ಪೆ ಸುಲಿದು, ಸಿಪ್ಪೆ ಬೇರೆ ಅಡಕೆ ಬೇರೆ ಮಾಡುವ ಯಂತ್ರದ ಪ್ರಾತ್ಯಕ್ಷಿಕೆ ಕೃಷಿಕರನ್ನು ಆಕರ್ಷಿಸಿತು.
ಭತ್ತದ ಕೃಷಿಯಲ್ಲಿ ಉಳುಮೆ, ಬಿತ್ತನೆ, ನಾಟಿ, ಕಳೆ ತೆಗೆಯುವ, ಪೈರು ಕಟಾವು ಮಾಡುವ ಹಾಗೂ ಪೈರಿನಿಂದ ಭತ್ತ ಬೇರ್ಪಡಿಸುವ ಯಂತ್ರಗಳನ್ನೂ ಪ್ರದರ್ಶನದಲ್ಲಿಡಲಾಗಿತ್ತು. ನವೀನ ಮಾದರಿ ಯಂತ್ರಗಳ ಪ್ರಾತ್ಯಕ್ಷಿಕೆ ಕೃಷಿಕರಿಗೆ ಪ್ರಯೋಜನಕಾರಿಯಾಗಿತ್ತು. ಶೂನ್ಯ ಬಂಡವಾಳದ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನವೂ ಗಮನ ಸೆಳೆೆಯಿತು. ವಿವಿಧ ತಳಿಯ ತರಕಾರಿ ಬೀಜ, ಸಾವಯವ ಗೊಬ್ಬರ, ಔಷಧಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯೂ ಅಲ್ಲಿದ್ದವು. ಕೃಷಿ ಮೇಳಕ್ಕೆ ಆಗಮಿಸಿದ ಎಲ್ಲರಿಗೂ ಅಚ್ಚುಕಟ್ಟಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಲಂಕಾರಿಕ ವಸ್ತುಗಳು, ಸಾವಯವ ತರಕಾರಿಗಳು: ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ವಿವಿಧ ಆಕಾರದ ಮಣ್ಣಿನ ಹಣತೆಗಳ ಮಾರಾಟ ಮಳಿಗೆಯೂ ಪ್ರದರ್ಶನದಲ್ಲಿದ್ದವು. ಮಣ್ಣಿನ ಹೂಜಿ, ವಿವಿಧ ಆಕಾರದ ಮಡಕೆಗಳು, ಕಾವಲಿ, ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಅಡುಗೆ ಪಾತ್ರೆಗಳೂ ಪ್ರದರ್ಶನದಲ್ಲಿದ್ದವು. ವಿವಿಧ ಜಾತಿಯ ಹೂವುಗಳು ಮಹಿಳೆಯರ ಗಮನ ಸೆಳೆದವು. ಸಾವಯವ ವಿಧಾನದಲ್ಲಿ ಬೆಳೆಸಿದ ತರಕಾರಿಗಳು ಕೂಡ ಪ್ರದರ್ಶನದಲ್ಲಿದ್ದವು. ಬ್ರಹ್ಮಾವರ ಉಪ್ಪಿನಕೋಟೆಯ ಮುಸ್ಲಿಂ ಸಮುದಾಯದವರು ಸಾಕಿ ಬೆಳೆಸಿದ ಓಂಗಾಲ್ ಸುಲ್ತಾನ ಮತ್ತು ಕಾಂಗ್ರೇಜ್ ತಳಿಯ ಜಾನುವಾರುಗಳಿದ್ದವು. ದೇಸೀ ಗಿರ್ ತಳಿಯ ಜಾನುವಾರುಗಳೂ ಇದ್ದವು.

Leave a Reply

Your email address will not be published. Required fields are marked *