ಆಲೂರು ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕು

ಆಲೂರು: ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಕೊಂಡಿದ್ದು, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ್ ಚಿಮ್ಮಲಗಿ ತಿಳಿಸಿದರು.

ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ನೀಡಲು ದಾಸ್ತಾನು ಮಾಡಲಾಗುತ್ತಿದೆ ಎಂದರು.

ಮುಂಗಾರು ಹಂಗಾಮಿಯಲ್ಲಿ ಕೃಷಿ ಇಲಾಖೆ ವತಿಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಭತ್ತ, ಹೈಬ್ರೀಡ್ ಮುಸುಕಿನ ಜೋಳ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ತಾಲೂಕಿನ ನಾಲ್ಕು ರೈತಸಂಪರ್ಕ ಕೇಂದ್ರಗಳಿಗೆ 515 ಕ್ವಿಂಟಾಲ್ ಬಿತ್ತನೆ ಮುಸುಕಿನ ಜೋಳ ಬೀಜ ಸಂಗ್ರಹವಾಗಿದ್ದು, ಈವರೆಗೂ 374 ಕ್ವಿಂಟಾಲ್ ಮಾರಾಟವಾಗಿದೆ. 200 ಕ್ವಿಂಟಾಲ್ ಭತ್ತ ಸಂಗ್ರಹವಾಗಿತ್ತು. ಸುಮಾರು 130 ಕ್ವಿಂಟಾಲ್ ಭತ್ತ ಮಾರಾಟವಾಗಿದೆ ಎಂದರು.

ಈ ಭಾರಿ 5600 ಹೆಕ್ಟರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡುವ ಗುರಿಯಿದ್ದು, ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂದಿದೆ. ಭತ್ತ ತಾಲೂಕಿನಲ್ಲಿ 5 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಸುಮಾರು 130 ಕ್ವಿಂಟಾಲ್ ತುಂಗಾ, ಇಂಟಾನ್ ತಳಿಯ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್, ಬೋರಾಕ್ಸ್, ಮಣ್ಣು ಸುಧಾರಕ ಜಿಪ್ಸಮ್‌ಗಳನ್ನು ಶೇ.50ರಷ್ಟು ಸಹಾಯಧನದಲ್ಲಿ ನೀಡಲಾಗುತ್ತಿದೆ ಎಂದರು.

ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಕಿಶೋರ್ ಮಾತನಾಡಿ, ಪ್ರಸ್ತುತ ಕೃಷಿ ಇಳುವರಿ ಮಟ್ಟ ಸಾಮಾನ್ಯ ಇಳುವರಿಗಿಂತ ಕಡಿಮೆ ಬರುತ್ತಿದೆ. ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವುದು, ರೈತರು ಅನುಸರಣೆ ಮಾಡುತ್ತಿರುವ ಬೇಸಾಯ ಕ್ರಮಗಳಲ್ಲಿ ನ್ಯೂನತೆಯಾಗಿದೆ. ಇವುಗಳನ್ನು ಸರಿಪಡಿಸಲು ಖುಷ್ಕಿ ಬೆಳೆಗಳ ಇಳುವರಿ ಹೆಚ್ಚಿಸಲು ತಾಲೂಕಿನಾದ್ಯಂತ ಆತ್ಮ ಯೋಜನೆಯಡಿ ಮುಸುಕಿನ ಜೋಳ ಬೆಳೆಯ ರೋಗ ತಡೆಗಟ್ಟುವ, ಲಘು ಪೋಷಕಾಂಶಗಳ ಬಳಕೆ ಬಗ್ಗೆ ಹಳ್ಳಿ-ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಯೋಗನಂದ್, ಕಸಬಾ ಹೋಬಳಿ ಕೃಷಿ ಅಧಿಕಾರಿ ಮಹಾಂತೇಶ್, ರೈತರಾದ ಮರಿಯಯ್ಯ, ಹೊನ್ನಾಚಾರ್, ಚಂದ್ರಯ್ಯ ಮತ್ತಿತರರಿದ್ದರು.