More

    ಜೈವಿಕ ಹಾಗೂ ಪರಿಸರ ಸ್ನೇಹಿ ಕ್ರಮದಿಂದ ರೇಷ್ಮೆ ಕೃಷಿ ನಿರ್ವಹಣೆ ಸಾಧ್ಯ

    ಕೋಲಾರ: ಜೈವಿಕ ಹಾಗೂ ಪರಿಸರ ಸ್ನೇಹಿ ಕ್ರಮದ ಮೂಲಕ ಪರಿಣಾಮಕಾರಿಯಾದ ರೇಷ್ಮೆ ಕೃಷಿ ನಿರ್ವಹಣೆ ಸಾಧ್ಯ ಎಂದು ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ. ತುಳಸಿರಾಮ್ ಹೇಳಿದರು.

    ಕೃಷಿ ವಿಜ್ಞಾನ ಕೇಂದ್ರ ಕೋಲಾರ, ರೇಷ್ಮೆ ಇಲಾಖೆಯಿಂದ ಶ್ರೀನಿವಾಸಪುರದ ಕಾಡುದೇವಂಡಹಳ್ಳಿ ಗ್ರಾಮದ ವೆಂಕಟೇಶಪ್ಪರವರ ಹಿಪ್ಪುನೇರಳೆ ತಾಕಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಪ್ಪುನೇರಳೆ ಬೇಸಾಯದಲ್ಲಿ ಎಲೆಸುರುಳಿ ಕೀಟ ಸಮಗ್ರ ನಿರ್ವಹಣೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

    ಚಳಿಗಾಲದಲ್ಲಿ ಹಿಪ್ಪುನೇರಳೆ ಬೆಳೆಗೆ ಎಲೆಸುರಳಿ ಕೀಟ ಹೆಚ್ಚು ಹಾನಿ ಮಾಡುವುದಲ್ಲದೆ ಶೇ.15ರಿಂದ 20ರಷ್ಟು ಸೊಪ್ಪಿನ ಇಳುವರಿ ಕುಂಠಿತಗೊಳಿಸುತ್ತದೆ. ಪ್ರತಿಬಾರಿ ರಾಸಾಯನಿಕ ಕ್ರಮದಿಂದ ಕೀಟ ನಿರ್ವಹಣೆ ಮಾಡದೆ ಜೈವಿಕ ಕ್ರಮದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸುವುದು ಸೂಕ್ತ ಎಂದರು.

    ಕೇಂದ್ರ ಸರ್ಕಾರ ಡಿಡಿವಿಪಿ ಕೀಟನಾಶಕವನ್ನು ಡಿಸೆಂಬರ್ 2020ರಿಂದ ಬ್ಯಾನ್ ಮಾಡಿದ್ದು, ರೇಷ್ಮೆ ಬೆಳೆಗಾರರು ಪರ್ಯಾಯವಾಗಿ ಬೇವಿನ ಬೀಜ ಶೇಖರಣೆ ಮಾಡಿ ಶೇ.5ರಷ್ಟು ಬೇವಿನ ಬೀಜದ ಕಷಾಯ ತಯಾರಿಸಿ ಹಿಪ್ಪುನೇರಳೆ ತೋಟಕ್ಕೆ ಸಿಂಪಡಿಸಿ ಎಲೆಸುರುಳಿ ಕೀಟ ಬೆಳವಣಿಗೆ ನಿಯಂತ್ರಿಸಬಹುದು. ಕೀಟನಾಶಕಮುಕ್ತ ಹಿಪ್ಪುನೇರಳೆಯನ್ನು ಬೆಳೆದು ಗುಣಮಟ್ಟದ ರೇಷ್ಮೆ ಹುಳು ಸಾಕಾಣಿಕೆ ಮಾಡಬಹುದು ಎಂದರು.

    ರೇಷ್ಮೆ ಕೃಷಿ ವಿಜ್ಞಾನಿ ಡಾ.ಕೆ.ಆರ್.ಶಶಿಧರ್ ಜೈವಿಕ ಪದ್ಧತಿಯಲ್ಲಿ ಟ್ರೈಕೊಗ್ರಾಮ ಖೀಲೊನಿಸ್ ಪರತಂತ್ರ ಜೀವಿ ಬಿಡುಗಡೆ ಹಾಗೂ ಸೋಲಾರ್ ಬೆಳಕಿನ ಬಲೆ ಬಳಕೆ ಬಗ್ಗೆ ತಿಳಿಸಿಕೊಟ್ಟು ರೇಷ್ಮೆ ಬೆಳೆಗಾರರು ಸಾಮೂಹಿಕವಾಗಿ ನಿರ್ವಹಣಾ ಕ್ರಮ ಬಳಸುವ ಮುಖಾಂತರ ಎಲೆಸುರುಳಿ ಕೀಟವನ್ನು ಮೊಟ್ಟೆಯ ಹಂತದಲ್ಲಿ ನಾಶಪಡಿಸುವುದರಿಂದ ಗುಣಮಟ್ಟದ ಸೊಪ್ಪು ಪಡೆಯಬಹುದು ಎಂದರು.

    ರೇಷ್ಮೆ ಉಪನಿರ್ದೇಶಕ ಎಂ.ಕೆ. ಪ್ರಭಾಕರ್ ಮಾತನಾಡಿ, ಜಿಲ್ಲೆಯ ರೈತರು ಹೆಚ್ಚಾಗಿ ತರಕಾರಿ ಬೆಳೆಗಳಿಗೆ ಕೀಟನಾಶಕ, ಕಳೆನಾಶಕ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಜತೆಗೆ ರೈತರ ದೇಹದಲ್ಲಿ ಕೀಟನಾಶಕದ ಅಂಶ ಸೇರ್ಪಡೆಯಾಗಿ ಮುಂದಿನ ದಿನಗಳಲ್ಲಿ ಆನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ ಎಂದು ಎಚ್ಚರಿಸಿದರು.
    ಶ್ರೀನಿವಾಸಪುರ ತಾಲೂಕು ರೇಷ್ಮೆ ಸಹಾಯಕ ನಿರ್ದೇಶ ನಾಗರಾಜ್, ಗ್ರಾಪಂ ಸದಸ್ಯ ವೆಂಕಟೇಶಪ್ಪ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts