ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮ್​ ಶಂಕರ್​ ಕಟಾರಿಯಾ ಅವರು ತಮ್ಮ ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಶುಕ್ರವಾರ ತಮ್ಮ 54ನೇ ಹುಟ್ಟು ಹಬ್ಬ ಆಚರಿಸಿಕೊಂಡ ರಾಮ್​ ಶಂಕರ್​ ಕಟಾರಿಯಾ, 54 ಕೆ.ಜಿ ತೂಕದ ಸಂಸತ್​ ಭವನದ ರೂಪದ ಕೇಕ್​ ಅನ್ನು ಪತ್ನಿ ಮೃದುಲಾ ಅವರೊಂದಿಗೆ ಸೇರಿ ಕತ್ತರಿಸಿದ್ದರು. ಕೇಕ್​ ಮೇಲೆ ಭಾರತದ ಧ್ಜಜವನ್ನೂ ಇರಿಸಲಾಗಿತ್ತು. ಆದರೆ, ಕೇಕ್​ ಕತ್ತರಿಸುವುದಕ್ಕೂ ಮೊದಲು ಧ್ವಜವನ್ನು ತೆಗೆಯಲಾಗಿತ್ತು. ಹೀಗೆ ಕತ್ತರಿಸಿದ ಕೇಕ್​ ಅನ್ನು ಪತಿ-ಪತ್ನಿ ಇಬ್ಬರೂ ಪರಸ್ಪರ ತಿನಿಸಿದ್ದರು. ಈ ವಿಡಿಯೋ ಈಗ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಸದ ಕಟಾರಿಯಾ ಅವರ ನಡೆ ಭಾರಿ ಟೀಕೆಗೆ ಗುರಿಯಾಗಿದೆ.

ವಿವಾದದ ಹಿನ್ನೆಲೆಯಲ್ಲಿ ಹಲವು ರಾಜಕಾರಣಿಗಳು ಸಂಸದ ಕಟಾರಿಯಾ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅಲ್ಲದೆ, ಬಿಜೆಪಿ ವಿರುದ್ಧ ಟೀಕೆಯ ಸುರಿಮಳೆಗೈದಿದ್ದಾರೆ.

” ದುರ್ವರ್ತನೆ ತೋರಿದ ಸಂಸದನ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು,” ಎಂದು ಹಿಂದು ಸಂಘಟನೆ ವಿಶ್ವ ಹಿಂದೂ ಪರಿಷತ್​ ಒತ್ತಾಯಿಸಿದೆ.

” ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿ ತಿನ್ನುವ ಮೂಲಕ ಸಂಸದ ಕಟಾರಿಯಾ ಭಾರತೀಯ ಸಂಸತ್​ನ ಘನತೆಗೆ ದಕ್ಕೆ ತಂದಿದ್ದಾರೆ,” ಎಂದು ಸಮಾಜವಾದಿ ಪಕ್ಷದ ಮುಖಂಡ ವಾಜೀದ್​ ನಾಸೀರ್​ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್​ನ​ ಆಗ್ರಾ ಮೆಟ್ರೋಪಾಲಿಟನ್​ ಅಧ್ಯಕ್ಷ ಹಾಜಿ ಜಮಾಲುದ್ದೀನ್​, ” ಈ ರೀತಿಯ ಕೇಕ್​ ಕತ್ತರಿಸುವ ಮೂಲಕ ಕಟಾರಿಯಾ ಅವರು ಭಾರತೀಯ ಸಂಸದೀಯ ವ್ಯವಸ್ಥೆಯ ಕಗ್ಗೊಲೆ ಮಾಡಿದ್ದಾರೆ. ಇವರಿಗೆ ಸಂಸತ್​ ಭವನ ಪ್ರವೇಶ ನಿರ್ಬಂಧಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಸಂಸದ ಕಟಾರಿಯಾ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಅವರು ವಿವಾದಿತ ಹೇಳಿಕೆಯೊಂದನ್ನು ನೀಡಿದ್ದರು. ಶಿಕ್ಷಣ ಮತ್ತು ದೇಶ ಕೇಸರಿಕರಣಗೊಳ್ಳಲಿದೆ ಹೇಳಿದ್ದ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು.