ಪುತ್ತೂರಿನಲ್ಲಿ ಅನಾವರಣಗೊಂಡ ಕೃಷಿ ಜಗತ್ತು

ಪುತ್ತೂರು: ಬಗೆಬಗೆಯ ಕೃಷಿ ಯಂತ್ರಗಳು, ಕಡಿಮೆ ವೆಚ್ಚದ ಸುಲಭ ಮನೆ, ಹೈನುಗಾರಿಕೆಯ ವಿವಿಧ ವಿಧಾನಗಳ ಪ್ರದರ್ಶನ, ವಿದ್ಯಾರ್ಥಿಗಳ ಸೆಳೆದ ಆಹಾರ ಖಾದ್ಯ… ಕಾತರದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ಜನರು…

ಇದು ವಿವೇಕಾನಂದ ಸಂಸ್ಥೆ ಮತ್ತು ಕ್ಯಾಂಪ್ಕೊ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಹಯೋಗದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮೂರು ದಿನಗಳ ಕೃಷಿಯಂತ್ರ ಮೇಳ, ಕನಸಿನ ಮನೆ-ಹೈನುಗಾರಿಕೆ ಪ್ರದರ್ಶನದ ಚಿತ್ರಣ.
ಯಂತ್ರ ಮೇಳದಲ್ಲಿ 154, ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆಗಳಿವೆ. 8 ಅಟೋಮೊಬೈಲ್, 4 ನರ್ಸರಿ, 4 ಕೃಷಿ ನಿಯತಕಾಲಿಕ ಹಾಗೂ ಬೀಜ ಮಾರಾಟ ಮಳಿಗೆಗಳು, 20 ಆಹಾರ ಮಳಿಗೆಗಳು ಮತ್ತು 20 ವ್ಯಾಪಾರ ಮಳಿಗೆಗಳು ಇಲ್ಲಿವೆ.

ಕಾರ್ಯಕ್ರಮವನ್ನು ಸಂಸದ ನಳಿನ್‌ಕುಮಾರ್ ಕಟೀಲು ಉದ್ಘಾಟಿಸಿದರು. ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೈನುಗಾರಿಕಾ ಮಳಿಗೆ, ಶಾಸಕ ಸಂಜೀವ ಮಠಂದೂರು ಕನಸಿನ ಮನೆ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಯಂತ್ರಮೇಳ ಉದ್ಘಾಟಿಸಿದರು. ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು.

ಯಂತ್ರಲೋಕ: ಡ್ರೋನ್ ಮೂಲಕ ಕೃಷಿ ಬೆಳೆಗಳಿಗೆ ಔಷಧ ಸಿಂಪಡಣೆಯ ಪ್ರಾತ್ಯಕ್ಷಿಕೆ, ಸುಸಜ್ಜಿತ ಕಾರ್ಬನ್ ಫೈಬರ್ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ನೂತನವಾಗಿ ಆವಿಷ್ಕಾರಗೊಂಡ ಹೈನುಗಾರಿಕಾ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನ, ವಿವಿಧ ಮೇವಿನ ತಳಿಗಳ ಪ್ರದರ್ಶನ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಮಾರಾಟ ವಿಶೇಷ ಆಕರ್ಷಣೆಯಾಗಿತ್ತು.

ಒಣ ಅಡಕೆ ಸುಲಿಯುವ ವಿವಿಧ ಕಂಪನಿಗಳ ಸುಧಾರಿತ ತಂತ್ರಗಳು, ಸಾಧಾರಣ ಬೈಕ್‌ನಿಂದ ಚಾಲಿತ ಹೈಡ್ರೋಲಿಕ್ ಡಂಪರ್ ಗಾಡಿ, ಅಡಕೆ ಮರಕ್ಕೆ ಗನ್ ಶಾಟ್ ಮೂಲಕ ಮದ್ದು ಸಿಂಪಡನೆ, ಅಡಕೆ ಮರ ಏರಿ ಮದ್ದು ಸಿಂಪಡಿಸುವ ಸ್ವಯಂಚಾಲಿತ ಮಷಿನ್, ಗಂಟೆಗೆ 1 ಸಾವಿರ ತೆಂಗಿನಕಾಯಿ ಸುಲಿಯುವ ಯಂತ್ರ, ವಿವಿಧ ಬಗೆಯ ಮಣ್ಣು ಕೊರೆಯುವ ಯಂತ್ರ, ಭತ್ತ ನಾಟಿ-ಕಟಾವು ಯಂತ್ರ, ಹುಲ್ಲು, ಮರ ಕತ್ತರಿಸುವ ಯಂತ್ರಗಳು ಮೇಳದಲ್ಲಿವೆ.

ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ತಯಾರಿಸಿದ ಮರಳು ಬೇರ್ಪಡಿಸುವ ಯಂತ್ರ, ಅಡಕೆ ತ್ಯಾಜ ವಿಲೇ ಯಂತ್ರ, ಇಟ್ಟಿಗೆ ನಿರ್ಮಾಣ, ಮರಮುಟ್ಟು ತಯಾರಿ, ಹನಿ ನೀರಾವರಿ, ಜೆಸಿಬಿ ಮತ್ತಿತರ ಯಂತ್ರೋಪಕರಣಗಳು ಪ್ರದರ್ಶನದಲ್ಲಿವೆ. ಅಡಕೆ ಮರ ಹತ್ತುವ ಪ್ರಾತ್ಯಕ್ಷಿಕೆಗೆ ಬೇಕಾಗಿ ಕನಿಷ್ಠ 35 ಅಡಿ ಎತ್ತರದ 25 ಅಡಕೆ ಮರಗಳನ್ನು ನೆಡಲಾಗಿದೆ.
ಕಡಿಮೆ ವೆಚ್ಚದ ಮಾದರಿ ಮನೆ ಜನರನ್ನು ಸೆಳೆಯುತ್ತಿದೆ. ಮುಂಭಾಗ ಕಂಪೌಂಡ್, ನಾಯಿಗೂಡು, ಬಾವಿ ನಿರ್ಮಿಸಲಾಗಿದೆ.

ಕೆಎಂಎಫ್‌ನ ಮಾದರಿ ಹಟ್ಟಿ:  ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಾದರಿ ಹಟ್ಟಿ ನಿರ್ಮಿಸಿ ಪ್ರದರ್ಶಿಸುತ್ತಿದೆ. ಈ ಆಧುನಿಕ ಹಟ್ಟಿಯಲ್ಲಿ ದನದ ಕೊಟ್ಟಿಗೆ, ಹಾಲುಕರೆಯುವ ವಿಧಾನ, ಆಹಾರ ಪದ್ಧತಿ ಹಾಗೂ ಮೇವು ತಯಾರಿ ಪ್ರದರ್ಶಿಸಲಾಗುತ್ತಿದೆ. ಇದರ ಮುಂಭಾಗ ಜಲಕೃಷಿ ವಿಧಾನದಿಂದ ಮೇವು ತಯಾರಿಯ ಚಿತ್ರಣ ನಿರೂಪಿಸಲಾಗಿದೆ.

ಮುಳಿಯದಿಂದ ಚಿನ್ನದ ಅಡಕೆ ಹಾರ: ಪ್ರಪಂಚದ ಮೊದಲ ಚಿನ್ನದ ಅಡಕೆ ಹಾರ ತಯಾರಿಸಿರುವ ಪುತ್ತೂರಿನ ಪ್ರಸಿದ್ಧ ಆಭರಣಗಳ ಸಂಸ್ಥೆ ಮುಳಿಯ ಜ್ಯುವೆಲ್ಸ್, ಅದನ್ನು ಮೇಳದಲ್ಲಿ ಪ್ರದರ್ಶಿಸುತ್ತಿದೆ. ಭೇಟಿ ನೀಡಿದವರು ಚಿನ್ನದ ಅಡಕೆ ಹಾರವನ್ನು ತಾವು ಹಾಕಿ ಸಂಭ್ರಮಿಸುತ್ತಿದ್ದಾರೆ. ಗುಜರಾತಿನ ಪ್ರತಿ ಮದುವೆ ಕಾರ್ಯಕ್ರಮದಲ್ಲೂ ಅಡಕೆ ಹಾರ ಬದಲಾಯಿಸಿಕೊಳ್ಳುವ ಸಂಪ್ರದಾಯವಿದ್ದು, ಸಂಪ್ರದಾಯಕ್ಕೆ ಅನುಗುಣವಾಗಿ ಅಡಕೆಗೆ ಚಿನ್ನದ ಕವಚ ರಚಿಸಿ ಹಾರ ತಯಾರಿಸಲಾಗಿದೆ.