ಕುಮಟಾ: ತಾಲೂಕಿನಾದ್ಯಂತ ಮಳೆಯ ಬಿರುಸು ಶುಕ್ರವಾರವೂ ಮುಂದುವರಿದಿದೆ. ನದಿಗಳಲ್ಲಿ ಸ್ವಲ್ಪ ಇಳಿಕೆಯಾಗಿದ್ದ ನೀರಿನ ಹರಿವು ಮತ್ತೆ ಹೆಚ್ಚಾಗಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಅಘನಾಶಿನಿ ನದಿಯಲ್ಲಿ ಹರಿವು ಜೋರಾಗಿದೆ. ನದಿಯ ಇಕ್ಕೆಲಗಳಲ್ಲಿ ತೋಟಗಳನ್ನು ಹೊಕ್ಕು ಜನವಸತಿ ಪ್ರದೇಶದತ್ತ ಇಣುಕಿರುವ ನೀರು, ಜನಜೀವನವನ್ನು ಪ್ರವಾಹದ ಎಚ್ಚರಿಕೆಯಲ್ಲೇ ಜಾಗೃತವಾಗಿರುವಂತೆ ಮಾಡಿದೆ.
ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಹಲವೆಡೆ ಗಟಾರ್ಗಳು ತುಂಬಿ ರಸ್ತೆಯ ಮೇಲೂ ಮೊಣಕಾಲೆತ್ತರಕ್ಕೆ ಮಳೆ ನೀರು ತುಂಬಿ ಹರಿಯುವಂತಾಯಿತು. ಇದರಿಂದ ಸಂಚಾರಕ್ಕೆ ಮಾತ್ರವಲ್ಲದೇ ಪಾದಚಾರಿಗಳಿಗೂ ತೀವ್ರ ಕಿರಿಕಿರಿ ಎದುರಿಸುವಂತಾಯಿತು. ಹಿರೇಕಟ್ಟು ಹಾಗೂ ಗುಡ್ನಕಟ್ಟು ಪ್ರದೇಶದ ಜನರಿಗಾಗಿ ತೆರೆಯಲಾಗಿದ್ದ ಕಾಳಜಿ ಕೇಂದ್ರವನ್ನು ಮುಂದುವರಿಸಲಾಗಿದೆ.
ತಹಸೀಲ್ದಾರ ಪ್ರವೀಣ ಕರಾಂಡೆ ಹಾಗೂ ಇತರ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.