ಸಕಾಲಕ್ಕೆ ಚಿಕಿತ್ಸೆ ಸಿಗದೆ ರೈತರು ಕಂಗಾಲು, ಗಡಿಭಾಗದಲ್ಲಿ ನಕಲಿ ವೈದ್ಯರ ಚೆಲ್ಲಾಟ
ಜಿ.ನಾಗರಾಜ್, ಬೂದಿಕೋಟೆ
ಬಂಗಾರಪೇಟೆ ತಾಲೂಕಿನಲ್ಲಿ ಒಂದು ತಿಂಗಳ ಹಿಂದೆ ಅಲ್ಲೊಂದು ಇಲ್ಲೊಂದು ಚರ್ಮಗಂಟು ರೋಗ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ದಿನ ಕಳೆದಂತೆ ರೋಗವು ಕರೊನಾ ವೈರಸ್ನಂತೆ ಪ್ರತಿ ಗ್ರಾಮಕ್ಕೂ ವ್ಯಾಪಕವಾಗಿ ಹರಡುತ್ತಿದ್ದು, ಅನ್ನದಾತರನ್ನು ನಿದ್ದೆಗೆಡಿಸಿದೆ.
ತಾಲೂಕಿನ ಗಡಿಭಾಗದ ಕದಿರಿನತ್ತ, ಚತ್ತಗುಟ್ಟಹಳ್ಳಿ, ನರಸಿಂಹಪುರ ಸೇರಿ ಹಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಹಲವು ರಾಸುಗಳು ರೋಗಕ್ಕೆ ತುತ್ತಾಗಿ ಮೃತಪಟ್ಟಿವೆ. ಜತೆಗೆ ರೋಗಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಪ್ರಮಾಣ ಸಹ ಇಳಿಕೆಯಾಗಿದೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜತೆಗೆ ಮನೆಯ ಇತರ ರಾಸುಗಳಿಗೆ ಸೋಂಕು ಹರಡುವ ಭೀತಿ ಉಂಟಾಗಿದೆ. ರೋಗದ ಬಗ್ಗೆ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಜತೆಗೆ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಲು ಕರೆ ಮಾಡಿದರೆ ೋನ್ ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಪಶು ಇಲಾಖೆ ಮೇಲೆ ನಂಬಿಕೆ ಇಲ್ಲದಂತಾಗಿದ್ದು, ಸರ್ಕಾರ ಎಚ್ಚೆತ್ತು ಮುಂಜಾಗ್ರತಾಕ್ರಮವಾಗಿ ಎಲ್ಲ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೋಗಕ್ಕೆ ತುತ್ತಾದ ರಾಸುಗಳ ಮೂಗಿನಲ್ಲಿ ನಿರಂತರವಾಗಿ ಜೊಲ್ಲು, ಕಣ್ಣ್ಣಿನಿಂದ ನೀರು ಸೋರುತ್ತಾ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿವೆ. ದಿನ ಕಳೆದಂತೆ ಮೈಮೇಲೆ ಎಂಟಾಗಿರುವ ಗಂಟುಗಳು ಒಡೆದು ಹುಣ್ಣಾಗುತ್ತಾ ಕಾಗೆ ಇತರ ಪಕ್ಷಿಗಳು ಚುಚ್ಚಿ ಗಾಯ ಮಾಡುತ್ತಿರುವ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರೋಗವನ್ನು ವಾಸಿ ಮಾಡಲು ಸರ್ಕಾರ ಮತ್ತು ಇಲಾಖೆೆಯಿಂದ ಯಾವುದೇ ಲಸಿಕೆ ಇಲ್ಲ ಎಂದು ಹೇಳಲಾಗುತ್ತಿದ್ದು, ರೋಗ ಪೀಡಿತ ರಾಸುಗಳನ್ನು ಇತರ ರಾಸುಗಳಿಂದ ಪ್ರತ್ಯೇಕಿಸಿ ಪಶು ಇಲಾಖೆ ನೀಡುವ ಚಿಕಿತ್ಸೆ ಜತೆಗೆ ತುಳಸಿ ಮತ್ತು ಬೇವು ಮಜ್ಜಿಗೆಯೊಂದಿಗೆ ಜಜ್ಜಿ ಅದರ ರಸವನ್ನು ರೋಗ ಪೀಡಿತ ರಾಸುಗಳ ಮೇಲೆ ಸಿಂಪಡಣೆ ಮಾಡಿ ರೋಗ ನಿಯಂತ್ರಿಸುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.
ಗ್ರಾಮೀಣ ಭಾಗದ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣಗೊಳ್ಳುತ್ತಿರುವ ಕಾರಣದಿಂದಾಗಿ ಹಸು ಖರೀದಿದಾರರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ರಾಸುಗಳಿಗೆ ತಗುಲಿದ ರೋಗಕ್ಕೆ ಚಿಕಿತ್ಸೆ ನೀಡಲು ತಾಲೂಕಿನಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಇರುವ ವೈದ್ಯರ ರ್ನಿಲಕ್ಷ$್ಯದಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ರಾಸುಗಳು ಅಸುನೀಗುತ್ತಿವೆ. ಪಶು ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಹಾಗೂ ರೋಗ ಉಲ್ಬಣವಾಗಿರುವುದನ್ನು ಅರಿತ ನಕಲಿ ವೈದ್ಯರ ಆಟ ಗಡಿ ಗ್ರಾಮಗಳಲ್ಲಿ ಹೆಚ್ಚಾಗಿದೆ. ತಮಿಳುನಾಡು ಹಾಗೂ ಆಂಧ್ರದಿಂದ ಬರುವ ನಕಲಿ ವೈದ್ಯರು ಚಿಕಿತ್ಸೆ ಹೆಸರಿನಲ್ಲಿ ರೈತರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಅವರು ನೀಡುವ ಚಿಕಿತ್ಸೆ ಫಲಕಾರಿಯಾಗದೆ ಹಲವು ರಾಸುಗಳು ಮೃತಪಡುತ್ತಿದ್ದು, ರೈತನಿಗೆ ಲಕ್ಷಾಂತರ ರೂ.ನಷ್ಟ ಉಂಟಾಗುತ್ತಿದೆ. ಸರ್ಕಾರ ಎಲ್ಲ ಪಶು ಆಸ್ಪತ್ರೆಗಳಲ್ಲಿ ವೈದ್ಯರನ್ನು ನೇಮಕ ಮಾಡಿ ರಾಸುಗಳಿಗೆ ಕಾಡುವ ರೋಗಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ರಾಸುಗಳನ್ನು ರಕ್ಷಣೆ ಮಾಡಿ ಹೈನೋದ್ಯಮಕ್ಕೆ ಉತೇಜನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಗ್ರಾಮಗಳಿಗೆ ವೈದ್ಯರನ್ನು ಕಳುಹಿಸಿ ಚಿಕಿತ್ಸೆೆ ನೀಡಲಾಗುತ್ತದೆ. ರೈತರು ಸಹ ರೋಗಗಳು ಕಾಣಿಸಿಕೊಂಡಾಗ ಖಾಸಗಿ ವೈದ್ಯರ ಮೊರೆ ಹೋಗದೆ ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರು ಹೇಳುವ ಮತ್ತು ನೀಡುವ ಔಷಧೋಪಚಾರವನ್ನು ರಾಸುಗಳಿಗೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಇಲಾಖೆಯಿಂದ ನೀಡುವ ಲಸಿಕೆಗಳನ್ನು ಕಾಲ ಕಾಲಕ್ಕೆ ನೀಡಬೇಕು.
ಜಿ.ಟಿ.ರಾಮಯ್ಯನ ಡಿಡಿ ಪಶು ಇಲಾಖೆ
ಗಡಿಭಾಗದ ಗ್ರಾಮಗಳಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗುತ್ತಿದೆ. ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದ ಕಾರಣ ಈಗಾಗಲೇ ರೋಗದಿಂದ ರಾಸು ಮೃತಪಟ್ಟಿದೆ. ನಮ್ಮ ಗ್ರಾಮ ಒಂದರಲ್ಲೇ 20 ಕ್ಕೂ ಹೆಚ್ಚಿನ ರಾಸುಗಳು ರೋಗಕ್ಕೆ ತುತ್ತಾಗಿದ್ದು, ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಲು ಮುಂದಾಗಬೇಕು.
ರಂಭ ರಾಮೋಜಿರಾವ್ ಚತ್ತಗುಟ್ಟಹಳ್ಳಿ