ಆನೇಕಲ್ : ಗೋದಾಮಿನಲ್ಲಿ ರಾಗಿ ಕೊಳೆಯಲು ಕಾರಣವಾದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಜತೆಗೆ ರೈತರಿಂದ ಲಂಚ ಪಡೆದ ಆರೋಪದಲ್ಲಿ ಏಜೆನ್ಸಿಯ ನೌಕರನ ಮೇಲೆ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ರೈತರಿಂದ ಖರೀದಿ ಮಾಡಿದ ರಾಗಿ ಗೋದಾಮಿನಲ್ಲಿ ಕೊಳೆಯುತ್ತಿರುವ ಕುರಿತು “ವಿಜಯವಾಣಿ’ಯಲ್ಲಿ ಜೂ.15ರಂದು “ಗೋದಾಮಿನಲ್ಲೇ ಕೊಳೆಯುತ್ತಿದೆ ರಾಗಿ’ ಶೀರ್ಷಿಕೆಯಲ್ಲಿ ವರದಿಯಾದ ಬೆನ್ನಲ್ಲೇ ಆನೇಕಲ್ ತಾಲೂಕು ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ತಾಲೂಕಿನ ರಾಮಕೃಷ್ಣಪುರದ ಗೋದಾಮಿನಲ್ಲಿ ಆಹಾರ ಇಲಾಖೆ ರೈತರಿಂದ ಖರೀದಿ ಮಾಡಿದ್ದ ರಾಗಿಯನ್ನು ಅವೈಜ್ಞಾನಿಕವಾಗಿ ಶೇಖರಣೆ ಮಾಡಿದ್ದ ಕಾರಣ ಗೋದಾಮಿನಲ್ಲಿ ರಾಗಿ ಕೊಳೆಯುತ್ತಿತ್ತು. ಇನ್ನೊಂದೆಡೆ ರಾಗಿ ಮಾರಾಟ ಮಾಡಲು ಬಂದ ರೈತರಿಂದ ಸಾವಿರಾರು ರೂಪಾಯಿ ಲಂಚ ಪಡೆಯುವ ಜತೆಗೆ ಪ್ರತಿ ರೈತನಿಂದ ಐವತ್ತು ಕೆಜಿಗೂ ಹೆಚ್ಚು ರಾಗಿಯನ್ನು ಅಕ್ರಮವಾಗಿ ಪಡೆಯಲಾಗುತ್ತಿತ್ತು. ಈ ಸಂಬಂಧ ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ರಾಗಿ ಖರೀದಿಗೆ ನೇಮಕ ಮಾಡಿದ್ದ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕೂಡಲೇ ರಾಗಿ ತೆರವು ಮಾಡಿದ್ದಲ್ಲದೆ, ಹಣ ಪಡೆದ ಆರೋಪದಲ್ಲಿ ಸಂತೋಷ ಎಂಬಾತನ ಮೇಲೆ ಕ್ರಮಕ್ಕೆ ಮುಂದಾಗಿದೆ.
ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಮಾಡುವ ನೆಪದಲ್ಲಿ ಏಜೆನ್ಸಿಯ ಸಿಬ್ಬಂದಿ ಅಕ್ರಮದಲ್ಲಿ ಕೈಜೋಡಿಸಿ ಹಿರಿಯ ಅಧಿಕಾರಿಗಳ ಹೆಸರು ಹೇಳಿ ಸಾವಿರಾರು ರೂಪಾಯಿ ಲಂಚ ಪಡೆದಿರುವುದು ವಿಜಯವಾಣಿ ವರದಿಯಿಂದ ಗೊತ್ತಾಗಿತ್ತು. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಇಷ್ಟು ದೊಡ್ಡಮಟ್ಟದ ಅಕ್ರಮ ಆದರೂ ಸರ್ಕಾರ ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ತಾಲೂಕಿನ ಕಿಸಾನ್ ಸಂದ ರೈತರು ಈ ಕುರಿತು ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಸೈಲೆಂಟ್ ಆಗಿದ್ದು, ಅಕ್ರಮದ ಜಾಲ ಬಹುದೊಡ್ಡದಿದೆಯೇ ಎಂಬ ಅನುಮಾನ ಮೂಡಿಸಿದೆ.