ದೇಹಕ್ಕಷ್ಟೇ ವಯಸ್ಸು ಮನಸ್ಸಿಗಲ್ಲ…

ಮಧ್ಯ ವಯಸ್ಸು ದಾಟುತ್ತಿದ್ದಂತೆಯೇ ‘ನನಗೆ ವಯಸ್ಸಾಯಿತು’ ಎಂದುಕೊಳ್ಳುವವರು ಬಹಳ ಮಂದಿ. ಆದರೆ ನಮ್ಮ ಯಶಸ್ಸಿಗೂ ನಮ್ಮ ವಯಸ್ಸಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಜೀವನದಲ್ಲಿ ಮುಂದುವರಿಯುವುದನ್ನು ಯಾವತ್ತಿಗೆ ನಿಲ್ಲಿಸುತ್ತೀವೋ ಅಂದೇ ಮುಪ್ಪು ಕವಿಯುತ್ತದೆ. ಆದ್ದರಿಂದ ಸಂಕಲ್ಪ ತೊಡಲು ಯೌವ್ವನ ಒಳ್ಳೆಯ ಕಾಲ.

| ಪದ್ಮಾ ಮೂರ್ತಿ

‘ಅಯ್ಯೋ ! ನಮ್ಮ ನಮ್ಮ ಮನೆ ಕೆಲಸವೇ ಸಾಕಾಗುತ್ತದೆ ಇನ್ನು ಬೇರೆ ರೀತಿಯ ಕೆಲಸದಲ್ಲಿ ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಸಮಯವೆಲ್ಲಿದೆ..? ವಯಸ್ಸು ಬೇರೆ ಆಯಿತಲ್ಲ..! ಎಲ್ಲಿ ಆಗುತ್ತದೆ ಹೇಳಿ?’

ಹೀಗೆ ಬಹಳಷ್ಟು ಜನ ಹೇಳುತ್ತಾರೆ. ಅದರಲ್ಲೂ ಮಧ್ಯ ವಯಸ್ಸು ದಾಟುತ್ತಿದ್ದಂತೆಯೇ ಇಂಥ ಮಾತು ಈಗೀಗಂತೂ ಮಾಮೂಲಾಗಿಬಿಟ್ಟಿದೆ. ಇನ್ನೂ ಹದಿಹರೆಯದವರು ಎನಿಸಿಕೊಳ್ಳುವ ಕಾಲದಲ್ಲಿಯೇ 60-70 ವರ್ಷದವರಂತೆ ಆಡುವವರೇ ಹೆಚ್ಚು.

ಆದರೆ ನಿಮಗೆ ಗೊತ್ತಿರಲಿ. ಕೆಲಸಕ್ಕೂ, ವಯಸ್ಸಿಗೂ ಸಂಬಂಧವೇ ಇಲ್ಲ. ಸದಾ ಒಂದಿಲ್ಲೊಂದು ಕೆಲಸದಲ್ಲಿ, ಅದರಲ್ಲೂ ಯುವಕರಿದ್ದಾಗಿನಿಂದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡು ಚಟುವಟಿಕೆಯಿಂದ ಕೂಡಿದ್ದರಂತೂ ವಯಸ್ಸು ಬಾಧಿಸುವುದೇ ಇಲ್ಲ. ಅರ್ಥಾತ್ ವಯಸ್ಸಾಗುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ.

ಬೆಂಜಮಿನ್ ಫ್ರಾಂಕ್ಲಿನ್ ಹೆಸರು ಕೇಳಿದ್ದೀರಾ? ಇವರು ಅಮೆರಿಕದ ರಾಜ್ಯಾಂಗವನ್ನು ರಚನೆ ಮಾಡಿದ್ದೇ ತಮ್ಮ 84ನೇ ವಯಸ್ಸಿನಲ್ಲಿ. ಪ್ರಸಿದ್ಧ ವಿಜ್ಞಾನಿಯಾಗಿದ್ದ ಥಾಮಸ್ ಆಲ್ವ ಎಡಿಸನ್, ತಮ್ಮ 80ನೇ ವಯಸ್ಸಿನಲ್ಲಿ ವೃಕ್ಷವಿಜ್ಞಾನದ ಅಧ್ಯಯನ ಆರಂಭಿಸಿ, ಆ ನಿಟ್ಟಿನಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದರು. ವೃಕ್ಷದಿಂದ ಹೊಸ ರಬ್ಬರ್ ಉತ್ಪಾದಿಸಿ, ವಿಶ್ವಕ್ಕೆ ಉಡುಗೊರೆಯಾಗಿ ನೀಡಿದರು. ಭಾರತದ ಶ್ರೇಷ್ಠ ವಿಜ್ಞಾನಿಯಾಗಿದ್ದ ಸಿ.ವಿ.ರಾಮನ್ ಮತ್ತು ಅಬ್ದುಲ್ ಕಲಾಂ ಕೂಡ ತಮ್ಮ ಇಳಿ ವಯಸ್ಸಿನಲ್ಲಿ ಅನೇಕ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು, ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು.

ಡಿಟರ್ಜೆಂಟ್ ಕ್ಷೇತ್ರದಲ್ಲಿ ಬಹಳ ಸ್ಪರ್ಧೆ ಇದ್ದ ಆ ಸಮಯದಲ್ಲಿ ಕರ್ಷನಬಾಬು ಅವರು ಸೈಕಲ್ ಮೇಲೆ ಡಿಟರ್ಜೆಂಟ್ ಸೋಪ್ ಪೌಡರ್ ಮಾರುತ್ತಾ ಮುಂದೆ ದೊಡ್ಡ ಸೋಪು ಕಂಪನಿಯ ಮಾಲೀಕರಾದರು. ಆಗ ಡಿಟರ್ಜೆಂಟ್ ಪೌಡರಿನ ತೀವ್ರ ಸ್ಪರ್ಧೆ ಇದ್ದಕಾಲ. ಮಲ್ಟಿನ್ಯಾಷನಲ್ ಕಂಪನಿಗಳ ಸ್ಪರ್ಧೆ ಎದುರಿಸಬೇಕಾಯಿತು. ಆದರೂ ಕರ್ಷನ್ ಅವರು ಕುಗ್ಗಿ ಹೋಗಲಿಲ್ಲ. ಆದ್ದರಿಂದ ಇಂದು ಅವರನ್ನು ‘ಮ್ಯಾಗ್ನೆಟಿಕ್ ಬಿಸಿನೆಸ್ ಮ್ಯಾನ್’ ಎಂದು ಕರೆಯಲಾಗುತ್ತದೆ. ಇದಕ್ಕೆ ಅವರ ವಯಸ್ಸು ಅಡ್ಡಿಯಾಗಲಿಲ್ಲ.

ಸಾಹಿತ್ಯ ಕ್ಷೇತ್ರದಲ್ಲಿ ಎಂ.ಕೆ. ಇಂದಿರಾ ಅವರ ಹೆಸರನ್ನು ಯಾರು ತಾನೇ ಕೇಳಿಲ್ಲ? ಅವರು ಬರವಣಿಗೆ ಆರಂಭಿಸಿದ್ದೇ 60ರ ನಂತರ. ಸೊಸೆ, ಮೊಮ್ಮಕ್ಕಳು ಬಂದ ಮೇಲೆ. ಅವರು ‘ಅಜ್ಜಿ’ಯಾದರೂ, ಮನಸ್ಸು ಮಾತ್ರ ಯೌವನಾವಸ್ಥೆಯಲ್ಲಿಯೇ ಇದ್ದುದರಿಂದ ಅಂಥ ಮಹಾನ್ ಲೇಖಕಿಯಾಗಿ ಗುರುತಿಸಿಕೊಂಡರು.

ವಯಸ್ಸಾದಂತೆಯೇ ಅನುಭವ ಪಕ್ವವಾಗುತ್ತದೆಯೇ ವಿನಾ ಬುದ್ಧಿ ಮಂಕಾಗುವುದಿಲ್ಲ ಎಂಬುದಕ್ಕೆ ಕೆಲವು ಉದಾಹರಣೆಗಳು ಇವು. ಇಂಥ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಮನುಷ್ಯ ಅನೇಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಬುದ್ಧಿವಂತಿಕೆ ತುಕ್ಕು ಹಿಡಿಯುವುದಿಲ್ಲ ಎಂಬುದು ಇದರ ಅರ್ಥ.

ಸಾಧನೆಗೆ ಸಂಬಂಧವಿಲ್ಲ…: ನಮ್ಮಲ್ಲಿ ಸ್ಥಿರ ಮನಸ್ಸು ಹಾಗೂ ಮುಂದುವರಿಯಬೇಕೆನ್ನುವ ಉತ್ಸಾಹ ಇರಬೇಕೇ ವಿನಾ ವಯಸ್ಸಿಗೂ, ಸಾಧನೆಗೂ ಸಂಬಂಧವೇ ಇಲ್ಲ ! ಯಶಸ್ಸು ಗಳಿಸಲು ಬೇಕಾಗಿರುವುದು ಬದುಕಿನ ಆಶಾವಾದದ ದೃಷ್ಟಿಕೋನ, ಸಾಧಿಸಬೇಕೆಂಬ ಉತ್ಸಾಹ ಹಾಗೂ ‘ನನ್ನ ಕೈಲಿ ಸಾಧ್ಯವಾಗುತ್ತದೆ’ ಎಂಬ ಮಾತು. ನಿರಾಶಾವಾದಿಗಳಿಗೆ ವಯಸ್ಸು, ಆರೋಗ್ಯ, ಅವಕಾಶ ಇದ್ದರೂ ನಿಷ್ಪ್ರಯೋಜಕ ಆಗಿಬಿಡುತ್ತಾರೆ.

ಈ ಕಾರಣದಿಂದಲೇ ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಯೋಚಿಸಿದರೆ, ಜೀವನದಲ್ಲಿ ಏನನ್ನಾದರೂ ಮಾಡುತ್ತೇನೆ ಎಂಬ ಛಲವಿರಬೇಕು. ಸ್ಪರ್ಧೆ, ಕಾಂಪಿಟೇಷನ್ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ‘ಅಯ್ಯೋ, ನಮ್ಮ ಕೈಯಲ್ಲಿ ಆಗುವುದಿಲ್ಲ. ಇದರಲ್ಲಿ ಗೆಲುವು ಸಿಗಲಾರದು’ ಎಂದು ಸುಮ್ಮನಿರಬಾರದು. ‘ಕರ್ಮಣ್ಯೇವಾಧಿಕಾರಸ್ತೇ’ ಎಂದು ಶ್ರೀಕೃಷ್ಣ ಹೇಳಿದಂತೆ, ‘ಪ್ರಯತ್ನ ನಮ್ಮದು, ಫಲಾಫಲ ಅವನದ್ದು’ ಎಂದುಕೊಳ್ಳುತ್ತಾ ನಮ್ಮ ಯಶಸ್ಸಿನ ಕೆಲಸಗಳಲ್ಲಿ ಮುಂದುವರಿಯುತ್ತಿರಬೇಕು. ಇದಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ಮನಸ್ಸಿನ ಜತೆ ಬೆರೆಯಿರಿ: ಒಂದು ಮಾತು ನೆನಪಿಟ್ಟುಕೊಳ್ಳಬೇಕು. ನೀವು ಬೇರೆಯವರ ಜತೆ ಅಲ್ಲ… ನಿಮ್ಮ ಮನಸ್ಸಿನ ಜತೆಗೆ ಸ್ಪರ್ಧೆ ಏರ್ಪಡಿಸಿಕೊಳ್ಳಿ. ಬೇರೆಯವರು ಮಾಡಿರುವ ಉತ್ತಮ ಕಾರ್ಯಕ್ಕಿಂತ ನಾನು ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳನ್ನು ನಿಸ್ವಾರ್ಥವಾಗಿ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ. ಹೀಗೆ ಮಾಡಿದರೆ ಕ್ರಮೇಣ ತಡವಾದರೂ ಉತ್ತಮ ಫಲಿತಾಂಶಗಳು ದೊರಕುತ್ತವೆ. ಜತೆಗೆ ಮನಸ್ಸು ಅಹ್ಲಾದಕರವಾಗಿದ್ದು ಆಯಸ್ಸೂ ವೃದ್ಧಿಸುತ್ತದೆ. ಕೊನೆಯದಾಗಿ ಒಂದು ಮಾತು. ‘ನನಗೆ ಇಷ್ಟವಾದ, ಉತ್ತಮ ಕಾರ್ಯದಲ್ಲಿ ಜೀವನದುದ್ದಕ್ಕೂ ಉತ್ಸಾಹ ಬಿಡದೆ, ತೊಡಗಿಕೊಳ್ಳುವೆ’ ಎಂದು ಈ ಯುವ ವಯಸ್ಸಿನಲ್ಲಿಯೇ ಸಂಕಲ್ಪಿಸಿಕೊಳ್ಳಿ. ಸಸಿ ನೆಟ್ಟು, ಕಷ್ಟವಾದರೂ ಸರಿ ಅದನ್ನು ಜತನದಿಂದ ಕಾಪಾಡಿದರೆ ಅದು ಒಳ್ಳೆಯ ಫಲ ನೀಡಿ ನಿಮ್ಮನ್ನು ಅದರ ಮಾಲೀಕರನ್ನಾಗಿ ಮಾಡುತ್ತದೆ ಅಲ್ಲವೇ? ಹಾಗೆಯೇ, ಕಷ್ಟಪಟ್ಟು ದುಡಿದರೆ ನಿಮ್ಮ ಸಾಧನೆಯ ಶಿಖರಕ್ಕೆ ನೀವೇ ಮಾಲೀಕರಾಗುತ್ತೀರಿ. ಇಂಥ ಮನೋಭಾವದವರು ಹೆಚ್ಚಾದಂತೆ ದೇಶವೂ. ಸಮೃದ್ಧವಾಗುತ್ತದೆ.

ಯೌವನದ ದಿನಗಳು ಬಲು ಮುಖ್ಯ

ಕೆಲವರು ವಿದ್ಯಾರ್ಥಿಗಳಿದ್ದಾಗ ಒಳ್ಳೊಳ್ಳೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಕಾಲೇಜು ಮೆಟ್ಟಿಲು ಏರುತ್ತಿದ್ದಂತೆಯೇ, ಕೆಟ್ಟಚಟಗಳ ಮೊರೆ ಹೋಗುವುದು ಸಹಜ. ಆದರೆ ಯೌವನದ ದಿನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ‘ವಯಸ್ಸಾದ ಮೇಲೆ ನೋಡಿಕೊಳ್ಳೋಣ’ ಎಂಬ ಉಡಾಫೆ ಮಾತು, ನಿಮ್ಮ ಭವಿಷ್ಯಕ್ಕೆ ಕಂಟಕವಾಗಬಹುದು. ಈ ವಯಸ್ಸಿನಲ್ಲಿ ಯಾರ ಬುದ್ಧಿ ಮಾತನ್ನೂ ತಲೆಗೆ ಹಾಕಿಕೊಳ್ಳುವಷ್ಟು ಪುರುಸೊತ್ತು ಇರುವುದಿಲ್ಲ ನಿಜ. ಆದರೆ ಸ್ವಲ್ಪ ಹೊತ್ತು ಏಕಾಂತದಲ್ಲಿ ಕೂತು ಭವಿಷ್ಯದ ಚಿಂತನೆ ಮಾಡಿದಾಗ ‘ಬುದ್ಧಿಮಾತು’ಗಳ ಗೂಢಾರ್ಥ ತಿಳಿದೀತು. ಶಾಲಾ-ಕಾಲೇಜುಗಳ ಪಠ್ಯಗಳನ್ನು ಬಾಯಿಪಾಠ ಮಾಡಿಕೊಂಡು ರ್ಯಾಂಕ್ ಪಡೆಯಬಹುದು. ಆದರೆ ಹೊರಪ್ರಪಂಚದಲ್ಲಿ ಅಥವಾ ಸಾಮಾಜಿಕವಾದ ಸ್ಪರ್ಧೆಯಲ್ಲಿ ಯಶಸ್ಸು ಬೇಕಾದಾಗ ಮನೋಶಕ್ತಿ ಮತ್ತು ಇಚ್ಛಾಶಕ್ತಿ ಮುಖ್ಯವಾಗಿರುತ್ತದೆ. ಜತೆಗೆ, ಎಷ್ಟೇ ಕಷ್ಟವಾದರೂ ಹಿಡಿದ ಕೆಲಸಗಳನ್ನು ಅರ್ಧದಲ್ಲೇ ಕೈ ಬಿಡುವುದಿಲ್ಲ ಎಂಬ ಮನೋಭಾವವಿದ್ದರೆ ನೀವು ಇತರರಿಗೆ ಮಾದರಿಯಾಗಬಹುದು.