ಕೇರಳದಲ್ಲಿ ಮರುಕಳಿಸಿದ ಹಿಂಸಾಚಾರ


ಕಾಸರಗೋಡು: ಶಬರಿಮಲೆಗೆ ಯುವತಿಯರ ಪ್ರವೇಶ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರ ಶಮನಗೊಳ್ಳುತ್ತಿದ್ದಂತೆ ಶುಕ್ರವಾರ ರಾತ್ರಿ ಮತ್ತೆ ಸ್ಫೋಟಗೊಂಡಿದೆ. ಕಿಡಿಗೇಡಿಗಳು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅವರ ಮನೆ-ಕಚೇರಿಗಳ ಮೇಲೆ ನಾಡ ಬಾಂಬ್ ಎಸೆಯುವುದು, ಬೆಂಕಿ ಹಚ್ಚುವ ಮೂಲಕ ದಾಳಿ ನಡೆಸುತ್ತಿದ್ದಾರೆ.

ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ವಿ.ಮುರಳೀಧರನ್ ಅವರ ಕಣ್ಣೂರು ಎರತ್ತೋಳಿಯಲ್ಲಿರುವ ತರವಾಡು ಮನೆಗೆ ನಾಡ ಬಾಂಬು ಎಸೆದಿದ್ದು, ಕಿಟಕಿ, ಬಾಗಿಲಿಗೆ ಹಾನಿಯಾಗಿದೆ. ತಲಶ್ಯೇರಿ ಸಿಪಿಎಂ ಮುಖಂಡ, ಶಾಸಕ ಶಂಸೀರ್ ಮನೆಗೆ ಬಾಂಬೆಸೆದ ಪರಿಣಾಮ ಮನೆಯ ಒಂದು ಪಾರ್ಶ್ವ ಹಾನಿಗೀಡಾಗಿದೆ. ಕಣ್ಣೂರು ಸಿಪಿಎಂ ಜಿಲ್ಲಾ ಮಾಜಿ ಕಾರ್ಯದರ್ಶಿ ಪಿ.ಶಶಿ ಮನೆಗೆ ಸ್ಟೀಲ್ ಬಾಂಬು ಎಸೆಯಲಾಗಿದೆ. ಪತ್ತನಂತಿಟ್ಟ ಸಿಪಿಎಂ ಮುಖಂಡ ಡಿ.ಬೈಜು ಮನೆಗೆ ದಾಳಿ ನಡೆದಿದೆ.

ಕಣ್ಣೂರು ಪುದಿಯತೆರುವಿನಲ್ಲಿ ಬಿಜೆಪಿ ವಲಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ. ಕಚೇರಿ ವಠಾರದಲ್ಲಿ ಮಲಗಿದ್ದ ಮೂಪನ್ಪಾರ ನಿವಾಸಿ ಸುರೇಶ್ ಎಂಬುವರು ಗಾಯಗೊಂಡಿದ್ದಾರೆ. ಪಳಯಂಗಾಡಿಯಲ್ಲಿ ಆರೆಸ್ಸೆಸ್ ಕಾರ್ಯಾಲಯ ವಿವೇಕಾನಂದ ಸೇವಾಮಂದಿರಕ್ಕೆ ಬೆಂಕಿ ಹಚ್ಚಲಾಗಿದೆ. ಅಳಿಕ್ಕೋಡ್ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಬಿಜು ಮನೆ, ಕಣ್ಣೂರು ವೆಲ್ಲಾಳದ ಕೆ.ಪಿ ಉಣ್ಣಿಕೃಷ್ಣನ್ ಮನೆ ಮತ್ತು ಅಂಗಡಿಗೆ ತಂಡ ದಾಳಿ ನಡೆಸಲಾಗಿದೆ.

ಸಿಪಿಎಂ ನೇತೃತ್ವದ ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ನೀಲೇಶ್ವರ ಚೆರುಪ್ಪುಳ ನಿವಾಸಿ, ಆಟೋ ಚಾಲಕ ಓ.ಕೆ ಶಾಜಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೆಸ್ಸೆಸ್ ಹಿರಿಯ ಸದಸ್ಯ, ಕೊಳಕ್ಕಾಟ್ ಚಂದ್ರಶೇಖರನ್‌ರಿಗೆ ತಂಡ ಹಲ್ಲೆ ನಡೆಸಿ, ಮನೆಗೆ ಹಾನಿ ಮಾಡಿದೆ. ಮಹಿಳೆಯರಿಗೂ ಹಲ್ಲೆಗೈಯಲಾಗಿದೆ.

ಹಿಂಸಾಚಾರದ ತಾಣವಾದ ಕೇರಳ 38 ಸಾವಿರ ಮಂದಿ ಮೇಲೆ ಕೇಸು: ಶಬರಿಮಲೆಗೆ ಮಹಿಳೆಯ ಪ್ರವೇಶ ಹಿನ್ನೆಲೆಯಲ್ಲಿ ಸರ್ಕಾರ ನಡೆಸಿದ್ದ ಮಹಿಳಾ ಗೋಡೆ ಅಭಿಯಾನ ಮತ್ತು ಮಹಿಳೆಯ ಪ್ರವೇಶದಿಂದ ಕೇರಳದಲ್ಲಿ ಭಾರಿ ಪ್ರತಿಭಟನೆಗಳು, ರಾಜಕೀಯ ಸಂಘರ್ಷಗಳು ನಡೆಯುತ್ತಿರುವುದರಿಂದ ರಾಜ್ಯ ಹಿಂಸಾಚಾರದ ತಾಣವಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ 38 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕೇಸು ದಾಖಲಾಗಿದ್ದು, ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ‘ಗೃಹ ಖಾತೆ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಫಲರಾಗಿದ್ದು, ಪೊಲೀಸ್ ವಲಯದಲ್ಲಿ ಅರಾಜಕತೆ ಕಾಡುತ್ತಿದೆ. ಆಕ್ರಮಣ-ದಾಳಿಗಳನ್ನು ಪೊಲೀಸರು ಕೈಕಟ್ಟಿ ನೋಡುವಂತಾಗಿದೆ. ಕೇರಳ ರಾಜ್ಯದಲ್ಲಿ ಡಿಜಿಪಿ ನೀಡುವ ನಿರ್ದೇಶನಕ್ಕೆ ಬೆಲೆಯಿಲ್ಲದಾಗಿದೆ’ ಎಂದು ಪ್ರತಿಪಕ್ಷ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ದೂರಿದ್ದಾರೆ.

ಮೋದಿ, ಷಾ ಭೇಟಿಗೆ ವೇದಿಕೆ: ಪ್ರಧಾನಿ ನರೆಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಕೇರಳದಲ್ಲಿ ಪ್ರವಾಸ ಕೈಗೊಳ್ಳುವಂತೆ ಮಾಡುವ ಮೂಲಕ ಶಬರಿಮಲೆ ವಿವಾದವನ್ನು ರಾಷ್ಟ್ರವ್ಯಾಪಿಯಾಗಿ ಪ್ರಚಾರಪಡಿಸಲು ಬಿಜೆಪಿ ತೀರ್ಮಾನಿಸಿದೆ.
ಪ್ರಧಾನಿ ಮೋದಿ ಜ.15ರಂದು ಕೊಲ್ಲಂನಲ್ಲಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಪಾಳ್ಗೊಳ್ಳುವರು. 27ರಂದು ತೃಶ್ಯೂರ್‌ನಲ್ಲಿ ಯುವಮೋರ್ಚಾ ರಾಜ್ಯಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಬರಿಮಲೆ ಇರುವ ಪತ್ತನಂತಿಟ್ಟ ಹಾಗೂ ಪಾಲಕ್ಕಾಡ್ ಜಿಲ್ಲೆಗೂ ಭೇಟಿ ನೀಡುವರು. ಇತರ ಬಿಜೆಪಿ ಮುಖಂಡರನ್ನು ರಾಜ್ಯಕ್ಕೆ ಕರೆಸುವ ಯತ್ನ ಸಾಗಿದೆ.

ಶಬರಿಮಲೆ 18 ಮೆಟ್ಟಿಲು ಸನಿಹ ಅಶ್ವತ್ಥಮರಕ್ಕೆ ಬೆಂಕಿ: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದ ಹದಿನೆಂಟು ಮೆಟ್ಟಿಲು ಸನಿಹದ ಅಶ್ವತ್ಥಮರಕ್ಕೆ ಬೆಂಕಿ ತಗುಲಿ ಸಿಬ್ಬಂದಿ ಮತ್ತು ಭಕ್ತರ ಆತಂಕಕ್ಕೆ ಕಾರಣವಾಯಿತು. ಬೆಳಗ್ಗೆ 11.30ಕ್ಕೆ ಅಗ್ನಿಕುಂಡದ ಬೆಂಕಿಜ್ವಾಲೆ ಸನಿಹದ ಅಶ್ವತ್ಥಮರಕ್ಕೆ ತಗುಲಿ ಎಲೆಗಳು ಕರಟಲಾರಂಭಿಸಿದ್ದು, ಕೊಂಬೆಗಳಿಗೂ ಬೆಂಕಿ ಹಬ್ಬಿತು. ತಕ್ಷಣ ಭಕ್ತರನ್ನು ಬಳಿ ತಡೆದು, ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿದ್ದಾರೆ.  ಅಯ್ಯಪ್ಪ ಭಕ್ತರು ಕೊಂಡೊಯ್ಯುವ ತುಪ್ಪ ತುಂಬಿದ ತೆಂಗಿನಕಾಯಿಯನ್ನು ಬೃಹತ್ ಅಗ್ನಿಕುಂಡಕ್ಕೆ ಸಮರ್ಪಿಸುವುದು ವಾಡಿಕೆ. ಇದರಿಂದ ಈ ಅಗ್ನಿಕುಂಡ ನಿರಂತರ ಉರಿಯುತ್ತಿರುತ್ತದೆ. ಈ ಬಾರಿ ಆ ಮರಕ್ಕೆ ಬೆಂಕಿ ಹತ್ತಿಕೊಂಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಶಬರಿಮಲೆ ಬಗ್ಗೆ ಮಾತನಾಡಿ ನಾನು ಸುಸ್ತಾಗಿದ್ದೇನೆ, ಇನ್ನು ಈ ಬಗ್ಗೆ ಮಾತಾಡುವುದಿಲ್ಲ, ದೇವರನ್ನು ನಾನು ವ್ಯಾಪಾರಕ್ಕೆ ಇಟ್ಟಿಲ್ಲ. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬ ಭಾವನೆ ನನ್ನದು.
| ಡಾ.ಜಯಮಾಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಹಿಂಸಾಚಾರವೆಸಗಿದ 295 ಮಂದಿ ಮೇಲೆ ಕೇಸು
ಮಂಜೇಶ್ವರ: ಹರತಾಳ ಬಳಿಕ ಮಂಜೇಶ್ವರದ ವಿವಿಧೆಡೆ ಸಂಭವಿಸಿದ ಹಿಂಸೆಗೆ ಸಂಬಂಧಿಸಿ ಐವರನ್ನು ಬಂಧಿಸಿರುವ ಮಂಜೇಶ್ವರ ಪೊಲೀಸರು 115 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಕುಂಬಳೆಯ ವಿವಿಧೆಡೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಆರು ಕೇಸು ದಾಖಲಾಗಿದೆ. ಅವುಗಳಲ್ಲಿ 180ಕ್ಕೂ ಅಧಿಕ ಮಂದಿ ಆರೋಪಿಗಳಿದ್ದು, ಒಬ್ಬನನ್ನು ಬಂಧಿಸಲಾಗಿದೆ.

ಕಡಂಬಾರ್ ಒಳಗುಡ್ಡೆ ನಿವಾಸಿ ಕಿರಣ್ ಕುಮಾರ್(27)ಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿದೆ. ಕಬಂದ್ಯೋಡು ಬಳಿ ಮನೆಗೆ ಹಾನಿ ಮಾಡಿದ ಮತ್ತು ವಾಹನಕ್ಕೆ ಹಾನಿಗೈದ ಪ್ರಕರಣದಲ್ಲಿ 50 ಮಂದಿ, ನಾರಾಯಣಮಂಗಲದ ಪ್ರಕರಣದಲ್ಲಿ 50 ಮಂದಿ, ಶಿರಿಯಾ ಪ್ರಕರಣದಲ್ಲಿ 50 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಉಪ್ಪಳ ಗೇಟ್ ಪರಿಸರದಲ್ಲಿ ಮುಬಾರಕ್ ಫೈಝಲ್ ಎಂಬಾತಗೆ ಹಲ್ಲೆ ಮಾಡಿ, ಕಾರಿಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ 30 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಬಸ್‌ಗೆ ಕಲ್ಲೆಸೆತ: ಕರ್ನಾಟಕದಿಂದ ಶಬರಿಮಲೆಗೆ ಸಾಗುತ್ತಿದ್ದ ಬಸ್‌ಗಳಿಗೆ ಕೈಕಂಬ ಮತ್ತು ನಯಾಬಜಾರ್‌ನಲ್ಲಿ ಶುಕ್ರವಾರ ರಾತ್ರಿ ಕಲ್ಲೆಸೆಯಲಾಗಿದೆ. ಬಸ್ ಗಾಜು ಹಾನಿಗೀಡಾಗಿದೆ. ಶಿರಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಬಂದ್ಯೋಡು ಎಸ್‌ಸಿ ಕಾಲನಿ ನಿವಾಸಿ ಕೃಷ್ಣ ಎ(21)ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.