ಡೆಲ್ಲಿ ವಿರುದ್ಧ ಸೋತು ಮತ್ತೆ ಮುಗ್ಗರಿಸಿದ ಆರ್​ಸಿಬಿ: ಗೆಲುವು ಕಾಣದೆ ನಿರಾಸೆಯ ಮುಖ ಹೊತ್ತು ನಡೆದ ಅಭಿಮಾನಿಗಳು

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಗೆಲುವು ಮರಿಚೀಕೆ ಆದಂತೆ ಕಾಣುತ್ತಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಕೂಡ ಆರ್‌ಸಿಬಿ ಮತ್ತೊಮ್ಮೆ ಮುಗ್ಗರಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 149 ರನ್​ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ವಿರಾಟ್​ ಕೊಹ್ಲಿ(41), ಮೊಯೀನ್​ ಅಲಿ(32), ಅಕ್ಷದೀಪ್​ ನಾಥ್​(19) ಹಾಗೂ ಎಬಿ ಡಿವಿಲಿಯರ್ಸ್​(17) ರನ್​ ಕಾಣಿಕೆ ನೀಡಿದರು.

ಡೆಲ್ಲಿ ಪರ ಕಾಗಿಸೋ ರಬಾಡ (4), ಕ್ರಿಸ್​ ಮೊರೀಸ್​(2) ಹಾಗೂ ಅಕ್ಷರ್​ ಪಟೇಲ್​ ಹಾಗೂ ಸಂದೀಪ್​ ಲಮಿಚನ್ನೆ ತಲಾ ಒಂದೊಂದು ವಿಕೆಟ್​ ಕಬಳಿಸಿದರು.

ಆರ್​ಸಿಬಿ ನೀಡಿದ 150 ರನ್​ ಗುರಿ ಬೆನ್ನತ್ತಿದ ಡೆಲ್ಲಿ ಪಡೆ 18.5 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 152 ರನ್​ ಕಲೆಹಾಕುವ ಮೂಲಕ ಆರ್​ಸಿಬಿ ವಿರುದ್ಧ ಗೆಲುವಿನ ಕೇಕೆ ಹಾಕಿತು. ತಂಡದ ಪರ ಶ್ರೇಯಸ್​ ಅಯ್ಯರ್​(67), ಪೃಥ್ವಿ ಶಾ(28) ಕೋಲಿನ್​ ಇಂಗ್ರಾಮ್​(22) ಹಾಗೂ ರಿಷಬ್​ ಪಂತ್​(18) ರನ್​ ಗಳಿಸಿದರು.

ಆರ್​ಸಿಬಿ ಪರ ನವದೀಪ್​ ಸೈನಿ (2), ಪವನ್​ ನೇಗಿ, ಟೀಮ್​ ಸೌಥಿ, ಮೊಯೀನ್​ ಅಲಿ ಹಾಗೂ ಮಹಮ್ಮದ್​ ಸಿರಾಜ್​ ತಲಾ ಒಂದೊಂದು ವಿಕೆಟ್​ ಪಡೆದರು.

ಒಟ್ಟು ಆರು ಪಂದ್ಯಗಳನ್ನು ಆಡಿರುವ ಆರ್​ಸಿಬಿ ಒಂದರಲ್ಲೂ ಗೆಲುವು ದಾಖಲಿಸದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದು ಟೂರ್ನಿಯಲ್ಲಿ ಫೈನಲ್​ ತಲುಪುವುದು ಅಸಾಧ್ಯವಾಗಿದೆ. (ಏಜೆನ್ಸೀಸ್​)