
ಚಿಕ್ಕಬಳ್ಳಾಪುರ: ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ನಡೆದ ನಗರಸಭೆಯ ಅಂಗಡಿ ಮಳಿಗೆಯ ಹರಾಜು ಪ್ರಕ್ರಿಯೆಗೆ ಉತ್ತಮ ವ್ಯಕ್ತವಾಗಿದ್ದು ಲಾಂತರ ಆದಾಯ ಗಳಿಕೆಯು ಖಾತ್ರಿಯಾಗಿದೆ.
ಪೊಲೀಸ್ ಬಿಗಿ ಬಂದೋ ಬಸ್ತ್ ನಲ್ಲಿ ಯಾವುದೇ ಅಡೆ ತಡೆಗಳಿಲ್ಲದೇ ನಿಯಮಾನುಸಾರ ಟೆಂಡರ್ನಲ್ಲಿ ಅತಿ ಹೆಚ್ಚಿನ ದರಕ್ಕೆ ಕೂಗಿದವರಿಗೆ ಅಂಗಡಿಗಳನ್ನು ಬಾಡಿಗೆಗೆ ನೀಡಲಾಯಿತು. ವ್ಯಾಪಕ ಪ್ರಚಾರದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸಲು ಮುಗಿ ಬಿದ್ದಿದ್ದರಿಂದ ನೂಕು ನುಗ್ಗಲಾಟ ಉಂಟಾಯಿತು. ಒಂದು ಹಂತದಲ್ಲಿ ಮಧ್ಯಾಹ್ನದವರೆಗೂ ಅರ್ಜಿ, ಮುಂಗಡ ಹಣ ಸ್ವೀಕಾರ ನಡೆದು, ಪ್ರಾರಂಭದ ಸಂಜೆಯಲ್ಲಿ ಒಂದೊಂದೇ ಅಂಗಡಿಯನ್ನು ನೀಡಲಾಯಿತು.
ನಗರದಲ್ಲಿನ ಸಂತೆ ಮೈದಾನದಲ್ಲಿನ ಮಳಿಗೆಯ 41 ಅಂಗಡಿಗಳು, ಬ್ರಾಂಚ್ ಆ್ ಕಟ್ಟಡದ 8 ಅಂಗಡಿಗಳು, ಗಂಗಮ್ಮನಗುಡಿ ರಸ್ತೆಯಲ್ಲಿರುವ 2 ಅಂಗಡಿಗಳು, ಐಡಿಎಸ್ ಎಂಟಿ ಯೋಜನೆಯಡಿ ಸಂತೆ ಮೈದಾನದಲ್ಲಿನ 48 ಅಂಗಡಿಗಳು ಸೇರಿದಂತೆ 99 ಅಂಗಡಿಗಳನ್ನು ಹರಾಜಿಗಿಡಲಾಗಿತ್ತು.
*ಅಧಿಕಾರಿಗಳ ನಡುವೆ ವಾಗ್ವಾದ
ಹರಾಜು ಕೂಗುವಲ್ಲಿ ತೀವ್ರ ಪೈಪೋಟಿ ಕಂಡು ಬಂತು. ನಿರಂತರವಾಗಿ ಕೂಗುತ್ತಿದ್ದನ್ನು ತಡೆದು, ಒಬ್ಬರಿಗೆ ಅಂತಿಮಗೊಳಿಸುವಲ್ಲಿ ಮುಂದಾಗುತ್ತಿದ್ದಂತೆ ಹಲವರು ಗಲಾಟೆ ಮಾಡಿದರು. ಪೌರಾಯುಕ್ತ ಮನ್ಸೂರು ಆಲಿ ಹಾಗೂ ಮುಖಂಡ ಮೋಹನ್ ಮುರಳಿ ನಡುವೆ ವಾಗ್ವಾದ ಉಂಟಾಯಿತು. ನಿಯಮಾನುಸಾರ ಬಿಡ್ ಕೂಗಲು ಮುಕ್ತ ಅವಕಾಶ ನೀಡಬೇಕು. ಅಧಿಕಾರಿಗಳು ಮನಸ್ಸಿಗೆ ಬಂದಂತೆ ನಿಲ್ಲಿಸುವುದು, ಪ್ರಾರಂಭಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಮಾತಿನಲ್ಲಿ ನುಣುಚಿಕೊಳ್ಳಲು ಯತ್ನಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ನಗರಸಭಾ ಉಪಾಧ್ಯಕ್ಷ ಜೆ.ನಾಗರಾಜ್, ನಿಯಮ ಉಲ್ಲಂಘಿಸದಿರಲು ಹಾಗೂ ಹರಾಜು ಕೂಗುವವರಿಗೆ ಮರ್ಯಾದೆ ಕೊಟ್ಟು ಮಾತನಾಡಿಸಲು ಸಿಬ್ಬಂದಿಗೆ ಸೂಚಿಸಿದರು.
*ಹೈರಾಣರಾದ ಸಿಬ್ಬಂದಿ
ಹರಾಜಿನಲ್ಲಿ ನಿರೀೆಗೂ ಮೀರಿ ವ್ಯಾಪಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಜನದಟ್ಟಣೆಯ ನಡುವೆ ಅರ್ಜಿ ಮತ್ತು ಮುಂಗಡ ಹಣ ಸ್ವೀಕಾರ, ಬಿಡ್ ಕೂಗುವುದು ಸೇರಿದಂತೆ ನಿರಂತರ ಒತ್ತಡ ಪ್ರಕ್ರಿಯೆಗಳಿಗೆ ಹೈರಾಣರಾದರು. ಇದರ ನಡುವೆ ಮಾಹಿತಿಗಾಗಿ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದವರಿಗೆ ಉತ್ತರಿಸುವಲ್ಲಿ ತಲೆ ನೋವು ಅನುಭವಿಸಿದರು.
ಲಕ್ಷಾಂತರ ಆದಾಯ ನಿರೀಕ್ಷೆ
ಬಹಿರಂಗ ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳ ಬಾಡಿಗೆ ದುಬಾರಿಯಾಗಿದ್ದು ಲಕ್ಷಾಂತರ ಆದಾಯ ಸಿಗುವಂತಹುದು ಪಕ್ಕಾ ಆಗಿದೆ. 30 ವರ್ಷಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದ ಅಂಗಡಿಗಳಿಗೆ ಪ್ರತಿ ತಿಂಗಳು ಕನಿಷ್ಠ 300 ರೂಗಳಿಂದ ಗರಿಷ್ಠ 4 ಸಾವಿರ ರೂ ಸಿಗುತ್ತಿತ್ತು. ಅದರಲ್ಲೂ ಹಲವರು ವರ್ಷಾನುಗಟ್ಟಲೇ ಹಣ ಬಾಕಿ ಉಳಿಸಿಕೊಂಡಿದ್ದು 28 ಲಕ್ಷ ರೂ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬಹುತೇಕ ಅಂಗಡಿಗಳು ಕನಿಷ್ಠ 10 ಸಾವಿರಕ್ಕಿಂತಲೂ ಹೆಚ್ಚಿಗೆ ಬಿಡ್ ಆಗಿದೆ. ಇದರಿಂದ ನಗರಸಭೆಗೆ ವಾರ್ಷಿಕ ಕೋಟ್ಯಂತರ ರೂ ಆದಾಯ ಸಂಗ್ರಹವಾಗಲಿದೆ.
*ಹರಾಜಿಗೆ ನಾನಾ ಅಡ್ಡಿ
ನಿಯಮಾನುಸಾರ ನಗರಸಭೆಯ ಮಳಿಗೆಗಳನ್ನು 12 ವರ್ಷಗಳಿಗೊಮ್ಮೆ ಹರಾಜು ಮೂಲಕ ಬಾಡಿಗೆಗೆ ನೀಡಬೇಕು. ಆದರೆ, ಸಂತೆ ಮೈದಾನದಲ್ಲಿನ ಅಂಗಡಿಗಳ ವಿಚಾರದಲ್ಲಿ 30 ವರ್ಷಗಳಿಂದಲೂ ಕಡೆಗಣಿಸಲಾಗಿತ್ತು. ಕೆಲವರು ವ್ಯಾಪಾರಿಗಳಿಂದ ಹಣವನ್ನು ಪಡೆದುಕೊಂಡು ಅನುಕೂಲ ಸಿಂಧು ವ್ಯವಸ್ಥೆ ಒದಗಿಸಿದ್ದರು. ನ್ಯಾಯಾಲಯದ ತೀರ್ಪು ಬಂದ ಬಳಿಕ ಹಲವು ಬಾರಿ ಹರಾಜು ಮುಂದೂಡಿಕೊಂಡು ಬಂದಿದ್ದು ನಗರಸಭೆಗೆ ಲಾಂತರ ಆದಾಯಕ್ಕೆ ಖೋತಾ ಬಿದ್ದಿತ್ತು. ಇದ ನಡುವೆ ಕಳೆದ ಬಜೆಟ್ ಮಂಡನೆ ಸಭೆಯಲ್ಲಿ ಸದಸ್ಯ ನರಸಿಂಹಮೂರ್ತಿ ತ್ವರಿತ ಪ್ರಕ್ರಿಯೆಗೆ ಒತ್ತಾಯಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಿರಿಯ ಸದಸ್ಯ ಎಸ್.ಎಂ.ರಫಿಕ್ ನಡುವೆ ವಾಗ್ವಾದ ಉಂಟಾಗಿತ್ತು. ಕೊನೆಗೆ ರಾಜಕೀಯ ಒತ್ತಡದ ನಡುವೆಯೂ ಹರಾಜು ಪ್ರಕ್ರಿಯೆ ಸುಗಮವಾಗಿ ನಡೆದಿದೆ.