ಕಾಣದ ಕೈ ಸರ್ಕಾರ ಬೀಳಿಸುತ್ತೆ, ಆ ಕೈ ಕಾಂಗ್ರೆಸ್​ನಲ್ಲೇ ಇದೆ: ಮಾಜಿ ಡಿಸಿಎಂ ಆರ್. ಅಶೋಕ್​

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಬೀಳುತ್ತೆ, ಆದರೆ ನಾವು ಬೀಳಿಸುವುದಿಲ್ಲ. ಕಾಣದ ಕೈ ಸರ್ಕಾರ ಬೀಳಿಸುತ್ತೆ. ಆ ಕೈ ಕಾಂಗ್ರೆಸ್​ನಲ್ಲಿಯೇ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​ ಹೇಳಿದರು.

ಸದಾಶಿವನಗರದ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರ ನಿವಾಸದಲ್ಲಿ ಎಸ್​.ಎಂ ಕೃಷ್ಣರವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಂತರ ಮಾತನಾಡಿದ ಅವರು, ಮೈಸೂರು ಅಷ್ಟೇ ಅಲ್ಲ, ಮಂಡ್ಯ ಸೇರಿದಂತೆ ಎಲ್ಲಾ ಕಡೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಮೊದಲಿನಿಂದಲೂ ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ನವರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಜೆಡಿಎಸ್ ಮಾತ್ರವಲ್ಲ ಕಾಂಗ್ರೆಸ್ ಕಾರ್ಯಕರ್ತರ ಮತಗಳೂ ನನಗೇ ಬಂದಿವೆ. ಹಾಗಾಗಿಯೇ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಸತತ ಗೆಲುವು ಸಾಧ್ಯವಾಗುತ್ತಿದೆ ಎಂದರು.

ಇದಕ್ಕು ಮುನ್ನ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ 88ನೇ ಹುಟ್ಟುಹಬ್ಬವನ್ನು ಕೇಕ್​ ಕತ್ತರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಮತ್ತು ಬಿಜೆಪಿ ಮುಖಂಡರು ಆಚರಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಎಸ್.​ಎಂ. ಕೃಷ್ಣ, ಬಿಜೆಪಿ ರಾಜ್ಯಾಧ್ಯಕ್ಷರು, ನಾಯಕರು‌ ನನಗೆ ಶುಭ ಹಾರೈಸ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಎಲ್ಲರ ಆಶೀರ್ವಾದದಿಂದ ಸಾರ್ವಜನಿಕ ಜೀವನದಲ್ಲಿ ಕೆಲ ಕಾಲ‌ ಇನ್ನೂ ಉತ್ಸಾಹದಿಂದ ಕೆಲಸ ಮಾಡುವ ಶಕ್ತಿ ಇದೆ. ರಾಜ್ಯದಲ್ಲಿ ಚುನಾವಣೆ ಬಳಿಕ ಏನೆಲ್ಲ ಪ್ರಕ್ರಿಯೆ ನಡೆಯುತಲಿದೆ ಎಂದು ಕುತೂಹಲದಿಂದ ನೋಡುತ್ತಾ ಇದ್ದೇನೆ ಎಂದರು. (ದಿಗ್ವಿಜಯ ನ್ಯೂಸ್​)