ಅಯೋಧ್ಯೆಯಲ್ಲಿ ಧರ್ಮ ಸಂಸದ್‌, ಭಾರಿ ಭದ್ರತೆ, ಶಿವ ಸೈನಿಕರ ಬೀಡು

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ನಿಂದ ಇಂದು ಅಯೋಧ್ಯೆಯಲ್ಲಿ ಧರ್ಮ ಸಂಸದ್‌ ಆಯೋಜಿಸಲಾಗಿದ್ದು, ಸಹಸ್ರಾರು ಜನ ಈಗಾಗಲೇ ಅಯೋಧ್ಯೆಗೆ ತೆರಳಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇನ್ನೊಂದೆಡೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಕೂಡ ನಿನ್ನೆಯೇ ಅಯೋಧ್ಯೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಡ ಹೇರಲು ಮುಂದಾಗಿದ್ದಾರೆ. ಶಿವಸೇನೆಯ ಸಾವಿರಾರು ಕಾರ್ಯಕರ್ತರು ಅಯೋಧ್ಯೆಗೆ ಬಂದಿಳಿದಿದ್ದಾರೆ.

ವಿಎಚ್‌ಪಿ ಮತ್ತು ಶಿವಸೇನೆಯ ಕಾರ್ಯಕರ್ತರು ಅಯೋಧ್ಯೆಯಲ್ಲಿ ಬೀಡು ಬಿಟ್ಟಿರುವುದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ.

ಹೆಚ್ಚುವರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು 700 ಪೊಲೀಸ್‌ ಪೇದೆಗಳನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. 42 ಪ್ರಾಂತೀಯ ಸಶಸ್ತ್ರ ಪಡೆ, ಐದು ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಭಯೋತ್ಪಾದನಾ ವಿರೋಧಿ ಪಡೆಯ ಕಮಾಂಡೋಗಳನ್ನು ಸ್ಥಳದಲ್ಲಿ ನೇಮಿಸಲಾಗಿದೆ. ಡ್ರೋನ್‌ ಕ್ಯಾಮರಾ ಮೂಲಕ ಕಣ್ಣಿಡಲಾಗುತ್ತದೆ. ಕಳೆದ ರಾತ್ರಿಯಷ್ಟೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಗಿತ್ಯನಾಥ್‌ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಭದ್ರತೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್‌ ವಕ್ತಾರ ತಿಳಿಸಿದ್ದಾರೆ.

ನಿನ್ನೆ ಮಾತನಾಡಿದ್ದ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕುಂಬಕರ್ಣ ನಿದ್ದೆ ಇಂದ ಎದ್ದೇಳಲಿ. ಆದಷ್ಟು ಬೇಗ ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಿಸಲಿ ಎಂದು ಸವಾಲು ಹಾಕಿದ್ದರು. (ಏಜೆನ್ಸೀಸ್)

ಅಯೋಧ್ಯೆಯತ್ತ ಭಕ್ತಸಾಗರ