ಆಂಧ್ರಪ್ರದೇಶ: ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್( PawanKalyan )ಅವರು ಅತ್ಯಾಚಾರ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳ ಅಪರಾಧ ತನಿಖೆಗೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ, ಮತ್ತೊಂದು ಲೈಂಗಿಕ ದೌರ್ಜನ್ಯದ ಘಟನೆ ತಿರುಪತಿಯಲ್ಲಿ ವರದಿಯಾಗಿದೆ.
ಆಂಧ್ರಪ್ರದೇಶದ ಯರ್ರಂಪಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿನಿ ಮಧ್ಯಾಹ್ನ ಶಾಲೆಯಿಂದ ಮನೆಗೆ ತೆರಳುವ ವೇಳೆ, ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಬಾಲಕಿಯನ್ನು ಪ್ರಸ್ತುತ ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕೃತ್ಯಗೆ ಸಂಬಂಧಪಟ್ಟಂತೆ ತನಿಖೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಪ್ರಾಥಮಿಕ ವರದಿ ಪ್ರಕಾರ, ದುಷ್ಕರ್ಮಿಗಳು ಬಾಲಕಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಮದ್ಯ ಸೇವಿಸುವಂತೆ ಒತ್ತಾಯಿಸಿ, ಲೈಂಗಿಕ ಹಲ್ಲೆ ನಡೆಸಲು ಮುಂದಾದರು ಎನ್ನಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಸಿನ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. “ಕಳೆದ ರಾತ್ರಿ, ನಾವು ವೈದ್ಯಕೀಯ ಪರೀಕ್ಷೆಗಳಿಗಾಗಿ ತಿರುಪತಿಗೆ ಬಾಲಕಿಯನ್ನು ಸ್ಥಳಾಂತರಿಸಿದ್ದೇವೆ” ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ಬರಾಯುಡು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
“ಹುಡುಗಿಯನ್ನು ಕೊಲೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಕೆಲವು ರಾಜಕೀಯ ಪಕ್ಷಗಳು ಕೂಡ ತಪ್ಪು ಮಾಹಿತಿ ಹರಡುತ್ತಿವೆ. ಆಕೆಯ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಪಪ್ರಚಾರದ ಸತ್ಯಕ್ಕೆ ದೂರವಾದ ಮಾತು” ಎಂದು ಎಸ್ಪಿ ಸುಬ್ಬರಾಯುಡು ದೃಢಪಡಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದಿದ್ದಾರೆ.