ಐಎಂಎ ಬಹುಕೋಟಿ ವಂಚನೆ ಪ್ರಕರಣ: ಪ್ರಭಾವಿ ರಾಜಕಾರಣಿಯ ಕೈವಾಡವಿದೆ ಎಂದ ರೋಷನ್​ ಬೇಗ್​

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ ಜ್ಯುವೆಲ್ಲರಿ ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್​ಐಟಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕರಣವನ್ನು ಸಿಸಿಬಿಗೆ ವಹಿಸಲು ನಿರ್ಧರಿಸಿದ್ದರೂ ಜಮೀರ್ ಅಹಮದ್​ ಸೇರಿ ಹಲವರು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು.

ಅಂತಿಮವಾಗಿ ವಿಶೇಷ ತನಿಖಾ ದಳ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ. ಆದರೆ ದೂರುದಾರರು ಸಿಸಿಬಿ ಕಚೇರಿಗೆ ಆಗಮಿಸುತ್ತಿದ್ದಾರೆ. ಎಸ್​ಐಟಿಗೆ ವರ್ಗವಾಗಿದ್ದರೂ ಗೊಂದಲದಲ್ಲಿ ಸಾರ್ವಜನಿಕರು ಸಿಸಿಬಿ ಕಚೇರಿ ಬಳಿ ಜಮಾಯಿಸುತ್ತಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಶಾಸಕ ರೋಷನ್​ ಬೇಗ್​ ಸರಣಿ ಟ್ವೀಟ್ ಮಾಡಿದ್ದು ತಮ್ಮ ಮೇಲಿನ ಆರೋಪಕ್ಕೆ ಕಿಡಿಕಾರಿದ್ದಾರೆ.

ನನ್ನ ರಾಜಕೀಯ ವೈಫಲ್ಯತೆಯಿಂದಾಗಿ ನನ್ನ ಹಿತೈಷಿಗಳು ಎನಿಸಿಕೊಂಡವರೇ ಒಳಸಂಚು ಮಾಡಿ ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಮಾಡಲಾದ ಆರೋಪಗಳಲ್ಲಿ ಹುರುಳಿಲ್ಲ. ಅದ್ಯಾವುದೋ ಆಧಾರವಿಲ್ಲದ ಆಡಿಯೋ ರೆಕಾರ್ಡಿಂಗ್​ ಮೂಲಕ ಪಿತೂರಿ ನಡೆಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಐಎಂಎ ವಂಚನೆ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಸಿಬಿಐ, ಎನ್​ಐಎ ಅಥವಾ ಎಸ್​ಎಫ್​ಐಒ ತನಿಖಾ ಸಂಸ್ಥೆಗಳಿಗೆ ವಹಿಸಬೇಕು. ಇದು ನನ್ನ ಮನವಿ ಕೂಡ ಎಂದಿದ್ದಾರೆ.

ಆಡಿಯೋ ರೆಕಾರ್ಡ್​ನಲ್ಲಿರುವ ಮಾತುಗಳ ಸತ್ಯಾಸತ್ಯತೆ ಅರಿಯದೆ ಕೆಲವು ಪತ್ರಕರ್ತರೂ ಕೂಡ ನನ್ನ ಗೌರವಕ್ಕೆ ಧಕ್ಕೆಯಾಗುವಂತೆ ಸುದ್ದಿ ಬಿತ್ತರಿಸಿದ್ದು ನೋವುಂಟು ಮಾಡಿದೆ. ಐಎಂಎನಲ್ಲಿ ಹಣ ಹೂಡಿಕೆ ಮಾಡುವ ಕಲ್ಪನೆಯನ್ನೂ ನಾನು ಮಾಡಿರಲಿಲ್ಲ. ಶಿವಾಜಿನಗರದಲ್ಲಿ ಪಿಪಿಪಿ ಯೋಜನೆ ಅಭಿವೃದ್ಧಿ ವಿಚಾರವಾಗಿ ಐಎಂಎದೊಂದಿಗೆ ಸಹಯೋಗದಲ್ಲಿದ್ದೆ. ಈ ಬಗ್ಗೆ ಸಾಕ್ಷಿಯನ್ನು ವಿಕೆಒ ಸರ್ಕಾರಿ ಶಾಲೆಯ ಫಾರ್ಮ್​ನಲ್ಲಿ ನೋಡಬಹುದು ಎಂದು ಟ್ವೀಟ್​ ಮಾಡಿದ್ದಾರೆ.

ಐಎಂಎ ಪ್ರಕರಣ ಹಲವು ರಾಜಕಾರಣಿಗಳು, ಕೆಲವು ಸಮುದಾಯಗಳ ಪ್ರಮುಖ ಮುಖಂಡರೊಂದಿಗೆ ತಳುಕುಹಾಕಿಕೊಂಡಿದೆ. ಐಎಂಎ ಜ್ಯುವೆಲ್ಲರಿ ಹೊರಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಪ್ರತಿಭಟನೆ ಮಾಡುತ್ತಿದ್ದರು. ಈ ಮಧ್ಯೆ ಸಮುದಾಯದಲ್ಲಿ ಬಲಿಷ್ಠ ಎಂದು ಕರೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಭಾವಶಾಲಿ ರಾಜಕಾರಣಿಯೊಬ್ಬ ನಿಜವಾಗಿಯೂ ಪ್ರಕರಣದಿಂದ ವಂಚಿತಗೊಂಡವರ ದುಃಖದ ಲಾಭ ಪಡೆದು ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಲು ಪ್ರಯತ್ನಿಸಿದ್ದಾಗಿ ನನಗೆ ಮಾಹಿತಿ ಬಂದಿದೆ.

ಇದೆಲ್ಲ ನಡೆಯುತ್ತಿದ್ದಾಗ ನಾನು ದೆಹಲಿಯಲ್ಲಿ ಸಭೆಯಲ್ಲಿದ್ದೆ. ನನ್ನ ಹೆಸರಿನಲ್ಲಿ ಆಧಾರವೇ ಇಲ್ಲದ ಆಡಿಯೋವೊಂದು ಸರ್ಕ್ಯೂಲೇಟ್​ ಆಗುತ್ತಿದ್ದ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *