ಮಂಗಳ ಬಳಿಕ ಶುಕ್ರಾನ್ವೇಷಣೆಗೆ ಇಸ್ರೋ ಸಜ್ಜು!

ಶ್ರೀಹರಿಕೋಟಾ (ಆಂಧ್ರಪ್ರದೇಶ): ಸತತ ಆರು ವರ್ಷಗಳ ಅಂಗಾರಕನ ಅನ್ವೇಷಣೆ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಮುಂದಿನ 10 ವರ್ಷಗಳಲ್ಲಿ ಶುಕ್ರ ಗ್ರಹ ಅಧ್ಯಯನ ಸೇರಿ 6 ವೈಜ್ಞಾನಿಕ ಯೋಜನೆಗಳತ್ತ ದೃಷ್ಟಿ ಹರಿಸಿದೆ.

ಭೂಮಿಯ ಅವಳಿ ಸೋದರಿ ಎಂದೇ ಕರೆಯಲಾಗುವ ಶುಕ್ರ ಗ್ರಹವು ಗಾತ್ರ, ಸಾಂದ್ರತೆ ಮತ್ತು ಗುರುತ್ವದಲ್ಲಿ ಅಂಗಾರಕ (ಮಂಗಳ) ಗ್ರಹವನ್ನು ಹೋಲುತ್ತದೆ. ಈ ಗ್ರಹದ ಹೊರ ಹಾಗೂ ಒಳ ಮೇಲ್ಮೈ, ವಾತಾವರಣ, ಸೌರ ಕಿರಣ ಅಥವಾ ಸೌರ ಗಾಳಿಗೆ ಪ್ರತಿಸ್ಪಂದಿಸುವಿಕೆ ಕುರಿತ ಅಧ್ಯಯನಕ್ಕೆ ಇಸ್ರೋ 2023ರಲ್ಲಿ ಗಗನನೌಕೆಯನ್ನು ಉಡಾವಣೆ ಮಾಡಲಿದೆ.

ಆದಿತ್ಯ ಎಲ್ 1, ಎಕ್ಸ್​ಪೋಸ್ಯಾಟ್ ಮಿಷನ್ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಮಂಗಳ ಕಕ್ಷೆಗಾಮಿ ಮಿಷನ್-2, ಶುಕ್ರಾನ್ವೇಷಣೆ, ಚಂದ್ರಯಾನ-3 ಮತ್ತು ಎಕ್ಸೋವಲ್ಡ್್ಸ ಯೋಜನಾ ಹಂತದಲ್ಲಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಶ್ರೀಹರಿಕೋಟಾದಲ್ಲಿ ಯುವಿಕಾ-2019 ಕಾರ್ಯಕ್ರಮದಲ್ಲಿ ಹೇಳಿದರು. ಮುಂದಿನ ಜುಲೈನಲ್ಲಿ ಚಂದ್ರಯಾನ-2 ಗಗನನೌಕೆ ಉಡಾವಣೆಯಾಗಲಿದೆ. ಜುಲೈ 2ರಂದು ಸೂರ್ಯಗ್ರಹಣ ಸಂಭವಿಸುವ ಕಾರಣ ಜುಲೈ ಅಂತ್ಯಕ್ಕೆ ಉಡಾವಣೆ ನಡೆಯಲಿದೆ.

ಸೂರ್ಯನ ಕರೋನದತ್ತಲೂ ಚಿತ್ತ

ಸೂರ್ಯ ಪರಿಶೋಧನೆಯ ಆದಿತ್ಯ ಎಲ್ 1 ಮಿಷನ್ ವ್ಯೋಮನೌಕೆ 2020ರ ಮಧ್ಯಭಾಗದಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ. ಇದು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ದೋಲನ ಕಕ್ಷೆಯ (ಲೈಬ್ರೇಷನ್ ಆರ್ಬಿಟ್) ಸೂರ್ಯ ಮತ್ತು ಭೂಮಿ ಮಧ್ಯೆ ಶೇ. 1ರಷ್ಟು ಅಂತರದಲ್ಲಿ ಸ್ಥಿತವಾಗಲಿದೆ. ಈ ಪ್ರದೇಶದಲ್ಲಿ ಎರಡೂ ಕಾಯಗಳ ಗುರುತ್ವಶಕ್ತಿ ಸಮಾನವಾಗಿರಲಿದೆ. ಈ ನೌಕೆ ಸೂರ್ಯನ ಪ್ರಭಾವಲಯದ (ಕರೋನ) ಅಧ್ಯಯನ ನಡೆಸಲಿದೆ. ಇದರಿಂದ ಮೇಲ್ಮಟ್ಟದ ವಾತಾವರಣದಲ್ಲಿ ಕರೋನ ಪ್ರಭಾವ ಮತ್ತು ಭೂಮಿಯ ಹವಾಮಾನ ಬದಲಾವಣೆಯ ಮೇಲಾಗುವ ಪರಿಣಾಮ ತಿಳಿಯುತ್ತದೆ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಜಾಗತಿಕ ಸಮಸ್ಯೆಯಾಗಿರುವ ವಾತಾವರಣದಲ್ಲಾಗುವ ಬದಲಾವಣೆಯ ಮುನ್ಸೂಚನೆ ನಿಖರ ಗ್ರಹಿಕೆ ಸಾಧ್ಯ.

ಎಕ್ಸ್​ಪೋ ಸ್ಯಾಟ್

ಎಕ್ಸ್​ಪೋ ಸ್ಯಾಟ್ ಐದು ವರ್ಷದ ಯೋಜನೆ. ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಪೋಲಾರ್ ಮೀಟರ್ ಸಾಧನವನ್ನು ಹೊತ್ತೊಯ್ಯುವ ಈ ಉಪಗ್ರಹ, ಭೂಮಿಯಿಂದ 500ರಿಂದ 700 ಕಿ.ಮೀ. ದೂರದಲ್ಲಿರುವ ವರ್ತಲಾಕಾರದ ಕಕ್ಷೆಯಲ್ಲಿ ಸ್ಥಿತವಾಗಿ ಬ್ರಹ್ಮಾಂಡದ ವಿಕಿರಣದ ಬಗ್ಗೆ ಅಧ್ಯಯನ ನಡೆಸಲಿದೆ.

ಶುಕ್ರ ಗ್ರಹದ ಪರಿಶೋಧನೆ ಯೋಜನೆ ಬಗ್ಗೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ. ಶುಕ್ರನಲ್ಲಿಗೆ ಹೋಗುವ ನೌಕೆ 20 ಸಾಮಗ್ರಿ ಹೊತ್ತೊಯ್ಯಲಿದೆ.

| ಕೆ.ಶಿವನ್, ಇಸ್ರೋ ಅಧ್ಯಕ್ಷ

Leave a Reply

Your email address will not be published. Required fields are marked *